‘ರಝಾಕರ್’ ಟೀಸರ್ ವಿವಾದ: ಸೆನ್ಸಾರ್ ಮಂಡಳಿ ಮೊರೆ ಹೋದ ಕೆಟಿಆರ್

Update: 2023-09-21 15:58 GMT

ರಝಾಕರ್ | Photo: X

ಹೈದರಾಬಾದ್: ‘ರಝಾಕರ್’ ಚಲನಚಿತ್ರವನ್ನು “ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಪ್ರಯತ್ನ” ಎಂದು ಮಂಗಳವಾರ ವ್ಯಾಖ್ಯಾನಿಸಿರುವ ಬಿಆರ್‍ಎಸ್ ಕಾರ್ಯಕಾರಿ ಅಧ್ಯಕ್ಷ ಹಾಗೂ ಸಚಿವ ಕೆ.ಟಿ.ರಾಮರಾವ್, ಈ ವಿಷಯವನ್ನು ರಾಜ್ಯ ಸರ್ಕಾರವು ಕೇಂದ್ರ ಸೆನ್ಸಾರ್ ಮಂಡಳಿ ಹಾಗೂ ತೆಲಂಗಾಣ ಪೊಲೀಸರ ಬಳಿಗೆ ಕೊಂಡೊಯ್ಯಲಿದೆ ಎಂದು ಹೇಳಿದ್ದಾರೆ ಎಂದು newindianexpress.com ವರದಿ ಮಾಡಿದೆ.

ಯಾತಾ ಸತ್ಯನಾರಾಯಣ ರಚಿಸಿರುವ, ಬಿಜೆಪಿ ನಾಯಕ ಗುಡೂರ್ ನಾರಾಯಣ ರೆಡ್ಡಿ ನಿರ್ಮಿಸಿರುವ ರಝಾಕರ್ ಚಲನಚಿತ್ರದ ಟೀಸರ್ ರವಿವಾರ ಬಿಡುಗಡೆಯಾಗಿದೆ. ಈ ಚಲನಚಿತ್ರದ ಟೀಸರ್ ರಾಜ್ಯದಲ್ಲಿ ಕೊಂಚ ಮಟ್ಟಿಗೆ ವಿವಾದ ಸೃಷ್ಟಿಸಿದ್ದು, ಈ ಟೀಸರ್ ತೆಲಂಗಾಣ ರೈತರ ಸಶಸ್ತ್ರ ಹೋರಾಟ ಅಥವಾ ತೆಲಂಗಾಣ ವಿಮೋಚನಾ ಹೋರಾಟದ ತುಣುಕನ್ನು ಹೊಂದಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಕೆ.ಟಿ.ರಾಮರಾವ್, “ಕೋಮು ಹಿಂಸಾಚಾರವನ್ನು ಪ್ರಚೋದಿಸಲು ಕೆಲವು ಬೌದ್ಧಿಕ ದಾರಿದ್ರ್ಯದ ಬಿಜೆಪಿ ಜೋಕರ್ ಗಳು ತಮ್ಮ ಕೈಲಾದಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಹಾಗೂ ತೆಲಂಗಾಣದಲ್ಲಿ ತಮ್ಮ ರಾಜಕೀಯ ಕಾರ್ಯಸೂಚಿಯನ್ನು ಧ್ರುವೀಕರಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಕಿಡಿ ಕಾರಿದ್ದಾರೆ.

ರಾಜ್ಯ ಸರ್ಕಾರವು ಈ ವಿಷಯವನ್ನು ಕೇಂದ್ರ ಸೆನ್ಸಾರ್ ಮಂಡಳಿ ಮತ್ತು ತೆಲಂಗಾಣ ಪೊಲೀಸರ ಬಳಿಗೆ ತೆಗೆದುಕೊಂಡು ಹೋಗಲಿದೆ ಎಂದು ಭರವಸೆ ನೀಡಿರುವ ಅವರು, ತೆಲಂಗಾಣ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಖಾತ್ರಿಗೊಳಿಸಲಾಗುವುದು ಎಂದೂ ಹೇಳಿದ್ದಾರೆ.

ರವಿವಾರ ನಡೆದ ಚಲನಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಝಾಕರ್ ಚಲನಚಿತ್ರವನ್ನು ಕಾಶ್ಮೀರ್ ಪೈಲ್ಸ್ ಹಾಗೂ ದ ಕೇರಳ ಸ್ಟೋರಿಗೆ ಹೋಲಿಸಿದ್ದ ಗೋಶಮಹಲ್ ಶಾಸಕ ಹಾಗೂ ಬಿಜೆಪಿಯ ಅಮಾನತುಗೊಂಡಿರುವ ಸದಸ್ಯ ಟಿ. ರಾಜಾಸಿಂಗ್ ರಾಮರಾವ್ ಅವರ ಪೋಸ್ಟ್ ಗೆ ತಕ್ಷಣವೇ ಪ್ರತಿಕ್ರಿಯಿಸಿದ್ದು, “#Razakar ಚಲನಚಿತ್ರವನ್ನು ನಿಷೇಧಿಸಲು ಯಾಕಿಷ್ಟು ಆತುರ ಕೆಟಿಆರ್ ಅವರೇ? ನಾವಿಬ್ಬರೂ ಮೊದಲು ಚಲನಚಿತ್ರವನ್ನು ನೋಡೋಣ ಮತ್ತು ಚಲನಚಿತ್ರದ ವಿರುದ್ಧ ನಿಷೇಧ ಹೇರಬೇಕೊ ಅಥವಾ ಹಿಂದೂಗಳ ವಿರುದ್ಧ ರಝಾಕರ್ ಗಳು ನಡೆಸಿರುವ ದೌರ್ಜನ್ಯದ ಕುರಿತು ಸಾರ್ವಜನಿಕರು ಅರಿತುಕೊಳ್ಳಬೇಕೋ ಎಂಬುದರ ಕುರಿತು ನಿರ್ಣಯಿಸೋಣ. ಜನರು ವಾಸ್ತವಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ” ಎಂದು ತಿರುಗೇಟು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News