ಎಂಎಸ್‌ಎಂಇಗೆ ಗೈಲ್‌ನಿಂದ 44 ಕೋಟಿ ರೂ. ಬಾಕಿ: ದ.ಕ. ಗುತ್ತಿಗೆದಾರರು, ಪೂರೈಕೆದಾರರ ಸಂಘ ಪಾವತಿಗೆ ಆಗ್ರಹ
ಮಂಗಳೂರು: ದಿವಾಳಿಯ ಅಂಚಿಗೆ ಸಿಲುಕಿದ್ದ ಜೆಬಿಎಫ್ ಪೆಟ್ರೋ ಕೆಮಿಕಲ್ಸ್ ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಂಡ ಗೈಲ್ ( ಗ್ಯಾಸ್ ಆಥಾರಿಟಿ ಆಫ್ ಇಂಡಿಯಾ ಲಿಮಿಟೆಡ್) ಸಂಸ್ಥೆಯು ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್‌ಎಂಇ) ಸಂಸ್ಥೆಗಳಿಗೆ ಬಾಕಿ ಇರಿಸಿದ 44 ಕೋಟಿ ರೂ.ಗಳನ್ನು ಪಾವತಿಸುವಂತೆ ದಕ್ಷಿಣ ಕನ್ನಡ ಗುತ್ತಿಗೆದಾರರು ಮತ್ತು ಪೂರೈಕೆ ದಾರರ ಸಂಘ(ರಿ) ಆಗ್ರಹಿಸಿದೆ.
ನಗರದ ಪುರಭವನದ ಮಿನಿ ಹಾಲ್‌ನಲ್ಲಿ ಬುಧವಾರ ಆರಂಭಗೊಂಡ ಎರಡು ದಿನಗಳ ‘ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕೈಗಾರಿಕಾ ಪ್ರದರ್ಶನ ’ ಎಂಎಸ್‌ಎಂಇ ಎಕ್ಸ್‌ಪೋ -2023’ ಉದ್ಘಾಟನೆಯ ವೇಳೆ ಸಭಾಂಗಣದ ಹೊರಗೆ ದಕ್ಷಿಣ ಕನ್ನಡ ಗುತ್ತಿಗೆದಾರರು ಮತ್ತು ಪೂರೈಕೆದಾರರ ಸಂಘ(ರಿ) ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಸ್ಥಳೀಯ ಎಂಎಸ್‌ಎಂಇಗಳನ್ನು ಉಳಿಸಲು ಬೆಂಬಲಕ್ಕಾಗಿ ಮನವಿ ಮಾಡಿದೆ.
ಸಂಘದ ಅಧ್ಯಕ್ಷ ಮ್ಯಾಕ್ಸಿಯನ್ ಸೆಬಾಸ್ಟಿಯನ್ ಮತ್ತು ಕಾರ್ಯದರ್ಶಿ ಎಂ.ಡಿ.ಪೂಜಾರಿ ನೇತೃತ್ವದಲ್ಲಿ ಸಂಘದ ಸದಸ್ಯರು ಪೆಟ್ರೋಲಿಯಂ ಸಚಿವಾಲಯ, ಎಂಎಸ್‌ಎಂಇ ಸಚಿವಾಲಯ ಮತ್ತು ರಾಜ್ಯ ಸರಕಾರವನ್ನು ಸಮಸ್ಯೆ ಬಗೆಹರಿಸಲು ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.
ಹಲವು ಘಟಕಗಳು ಜೆಬಿಎಫ್ ನಿಂದ ಬಾಕಿ ಪಾವತಿಯನ್ನು ಪಡೆದ ನಂತರ ಸಾಲಗಳನ್ನು ಮರುಪಾವತಿ ಮಾಡುವ ಭರವಸೆಯೊಂದಿಗೆ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಸಮಸ್ಯೆ ಎದುರಿಸುತ್ತಿದೆ. ಬ್ಯಾಂಕ್‌ಗಳ ಸಾಲ ವಸೂಲಾತಿಯಿಂದಾಗಿ ಶೇ.20ಕ್ಕೂ ಹೆಚ್ಚು ಬಾಧಿತ ಎಂಎಸ್‌ಎಂಇ ಘಟಕಗಳು ಮುಚ್ಚುವ ಹಂತ ದಲ್ಲಿವೆ ಎಂದು ಅವರು ಹೇಳಿದ್ದಾರೆ.
ಈ ಘಟಕಗಳು 3,000 ಜನರಿಗೆ ನೇರ ಉದ್ಯೋಗದ ಜೊತೆಗೆ 1,500 .ಜನರಿಗೆ ಪರೋಕ್ಷ ಉದ್ಯೋಗವನ್ನು ನೀಡಿವೆ. ಹಣಕಾಸಿನ ಒತ್ತಡವು ನಗದು ಹರಿವಿನ ಸಮಸ್ಯೆಗಳು, ಸಂಬಳವನ್ನು ಪಾವತಿಸಲು ಅಸಮರ್ಥನೆ ಮತ್ತು ಕೆಲವು ಘಟಕ ಗಳಿಗೆ ದಿವಾಳಿತನಕ್ಕೆ, ಕಾರಣವಾಗಿದೆ. ಈ ಘಟಕಗಳ ಮುಚ್ಚುವಿಕೆಯು ಈ ಪ್ರದೇಶದಲ್ಲಿ ನಿರುದ್ಯೋಗಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಜೆಬಿಎಫ್‌ಗೆ ಭೂಮಿ ಕೊಟ್ಟವರಿಗೆ ಪರಿಹಾರ ನೀಡಲಾಗಿತ್ತು. ಆದರೆ ಅವರಿಗೆ ಇವತ್ತು ಉದ್ಯೋಗವಿಲ್ಲದಾಗಿದೆ. ಗೈಲ್ ಸ್ಥಳೀಯರಿಗೆ ಉದ್ಯೋಗ ಕೊಡುತ್ತಿಲ್ಲ. ಅಲ್ಲದೆ ಸ್ಥಳೀಯ ಗುತ್ತಿಗೆದಾರರು ಮತ್ತು ಪೂರೈಕೆದಾರರನ್ನು ಕಡೆಗಣಿಸಿ ಮುಂಬೈ , ಉತ್ತರ ಭಾರತದವರಿಗೆ ಗುತ್ತಿಗೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.