ರಿಜಿಸ್ಟ್ರಾರ್ ಕಚೇರಿಯಿಂದ ಆಧಾರ್ ಮಾಹಿತಿ ಸೋರಿಕೆ ಆರೋಪ: ಮುದ್ರಾಂಕ, ನೋಂದಣಿ ಇಲಾಖೆಯಿಂದ ನಿರಾಕರಣೆ
ಮಂಗಳೂರು: ರಾಜ್ಯದಲ್ಲಿ ಆಸ್ತಿ ನೋಂದಣಿಗೆ ಸಂಬಂಧಿಸಿ ಹೊಸ ಕಾವೇರಿ-2 ವ್ಯವಸ್ಥೆ ಜಾರಿಯಾದ ಬಳಿಕ ಸದ್ಯ ದಿನವೊಂದಕ್ಕೆ ಸರಾಸರಿ 9,000ದಷ್ಟು ಆಸ್ತಿ ದಾಖಲೆಗಳು ನೋಂದಣಿಗೊಳ್ಳುತ್ತಿವೆ. ಆದರೆ, ಮಂಗಳೂರು ಸೇರಿದಂತೆ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಸ್ತಿ ನೋಂದಣಿ ಬಳಿಕ ಆಧಾರ್ ಸಂಖ್ಯೆ ಮತ್ತು ಬಯೋಮೆಟ್ರಿಕ್ ವಿವರಗಳ ಸೋರಿಕೆಯಾಗುತ್ತಿದೆ ಎಂಬ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ರಾಜ್ಯದ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಂಗಳೂರು ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ದಾಖಲೆ ಗಳ ನೋಂದಣಿ ಸಮಯದಲ್ಲಿ ನೀಡಲಾದ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಸೋರಿಕೆಯಾಗಿ ಆಧಾರ್ ಎನೇಬಲ್ಡ್ ಪೇಮೆಂಟ್ ವ್ಯವಸ್ಥೆ(ಎಇಪಿಎಸ್)ಯಡಿ ಹಣ ಕಳೆದುಕೊಂಡಿರುವುದಾಗಿ ಮಂಗಳೂರು ನಗರ ಪೊಲೀಸರಿಗೆ ನೀಡಲಾದ ಸುಮಾರು 15 ದೂರುಗಳಿಗೆ ಸಂಬಂಧಿಸಿ ಹಿರಿಯ ಅಧಿಕಾರಿಯನ್ನು ಪ್ರಶ್ನಿಸಿದಾಗ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಹೊಸ ಕಾವೇರಿ-2 ವ್ಯವಸ್ಥೆಯಡಿ ನೋಂದಣಿ ಸಮಯದಲ್ಲಿ ತೆಗೆದುಕೊಳ್ಳಲಾಗುವ ಆರು ಗುರುತಿನ ದಾಖಲೆಗಳಲ್ಲಿ ಆಧಾರ್ ಒಂದಾಗಿದೆ ಮತ್ತು ದಾಖಲಾತಿ ಸಂದರ್ಭ ಪಡೆಯಲಾಗುವ ಬೆರಳಚ್ಚನ್ನು ಕೂಡಾ ಸಿಸ್ಟಮ್ನಲ್ಲಿ ಸಂಗ್ರಹಿಸಲಾಗುವುದಿಲ್ಲ. ಹಾಗಾಗಿ ಈ ಮಾಹಿತಿಗಳು ಸೋರಿಕೆಯಾಗುವ ಪ್ರಶ್ನೆಯೇ ಇಲ್ಲ ಎಂದು ಅವರು ಅಭಿಪ್ರಾಯಿಸಿದ್ದಾರೆ.
‘ಆಧಾರ್ ಮತ್ತು ಬಯೋಮೆಟ್ರಿಕ್ ಮಾಹಿತಿ ಸೋರಿಕೆಗೆ ನಾವು ಖಂಡಿತಾ ಕಾರಣರಲ್ಲ’ ಎಂದು ಸ್ಪಷ್ಟಪಡಿಸಿರುವ ಹಿರಿಯ ಅಧಿಕಾರಿ, ದೃಢೀಕರಣಕ್ಕಾಗಿ ಆಧಾರ್ ಮತ್ತು ಬಯೋಮೆಟ್ರಿಕ್ ವಿವರಗಳನ್ನು ಇತರ ಕಡೆಗಳಲ್ಲಿಯೂ ಪಡೆಯಲಾಗುತ್ತಿದೆ. ಬಂದಿರುವ ದೂರುಗಳ ಕುರಿತು ನಡೆಯುತ್ತಿರುವ ಪೊಲೀಸ್ ತನಿಖೆಯಿಂದ ಆಧಾರ್ ಮತ್ತು ಬಯೋಮೆಟ್ರಿಕ್ ವಿವರಗಳ ಸೋರಿಕೆಯ ಮೂಲ ಪತ್ತೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ನಡುವೆ, ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಾಖಲೆ ಸಂಗ್ರಹಿಸುವವರಿಗೆ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ಮಾತ್ರ ನಮೂದಿಸುವಂತೆ ಸೆಪ್ಟಂಬರ್ 27ರಂದು ಸೂಚನೆ ನೀಡಲಾಗಿದೆ. ಆಧಾರ್ ಪ್ರತಿಗಳನ್ನು ಕೂಡಾ ಸ್ವೀಕರಿಸದಿರಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಜತೆಗೆ, myaadhar.uidai.gov.in ಅಥವಾ myaadhaar ಅಪ್ಲಿಕೇಶನ್ನಲ್ಲಿ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡುವ ಮೂಲಕ ದುರುಪಯೋಗ ತಡೆಗಟ್ಟಲು ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಅ. 10ರಂದು ಇಲಾಖೆಯು ತನ್ನ ವೆಬ್ಸೈಟ್ (https://www.youtube.com/watch?v=Jtq6nTtpu5A)ನಲ್ಲಿ ಈ ಕುರಿತು ಯೂಟ್ಯೂಬ್ ವೀಡಿಯೊವನ್ನು ಕೂಡಾ ಪೋಸ್ಟ್ ಮಾಡಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
ರಾಜ್ಯದ 255 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ -2 ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿದೆ. ನೋಂದಣಿ ಪ್ರಕ್ರಿಯೆಯ ವೇಗ ಹೆಚ್ಚಿಸುವುದು ಹಾಗೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಹೊಸ ವ್ಯವಸ್ಥೆ ಅಳವಡಿಸಲಾಗಿದೆ. ರಾಜ್ಯಾದ್ಯಂತ ದಿನಕ್ಕೆ ಸರಾಸರಿ 9,000 ದಾಖಲೆಗಳು ನೋಂದಣಿಯಾಗುತ್ತಿದ್ದರೆ, ಮಂಗಳೂರು ತಾಲೂಕಿನಲ್ಲಿ ಪ್ರತಿದಿನ ಸರಾಸರಿ 75 ದಾಖಲೆಗಳು ನೋಂದಣಿಯಾಗುತ್ತಿವೆ.
ದಾಖಲೆ ಆದಾಯ ಸಂಗ್ರಹ
ಸೆಪ್ಟಂಬರ್ 29ರಂದು, ರಾಜ್ಯಾದ್ಯಂತ 22,695 ದಾಖಲೆಗಳನ್ನು ನೋಂದಾಯಿಸಲಾಗಿದ್ದು, 260 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಸೆಪ್ಟಂಬರ್ 27ರಂದು 26,260 ದಾಖಲೆಗಳನ್ನು ನೋಂದಾಯಿಸಿ 312 ಕೋಟಿ ರೂ. ಹಾಗೂ ಸೆಪ್ಟಂಬರ್ 25 ರಂದು 15,936 ದಾಖಲೆಗಳನ್ನು ನೋಂದಾಯಿಸಿ 158 ಕೋಟಿ ರೂ.ನ್ನು ಸಂಗ್ರಹಿಸುವ ಮೂಲಕ ದಾಖಲೆಯ ಆದಾಯ ಸಂಗ್ರಹವಾಗಿದೆ ಎಂದು ಇಲಾಖೆ ತನ್ನ ವೆಬ್ಸೈಟ್ನಲ್ಲಿ ಹೇಳಿಕೊಂಡಿದೆ