ಎಂಸಿಸಿ ಬ್ಯಾಂಕಿಗೆ ಅನಿಲ್ ಲೋಬೊ ತಂಡ ಅವಿರೋಧ ಪುನರಾಯ್ಕೆ: 2028ರವರೆಗೆ ಮತ್ತೆ ಸಾರಥ್ಯ

Update: 2023-08-21 12:58 GMT

ಮಂಗಳೂರು: ಮಂಗಳೂರು ಕಥೋಲಿಕ್ ಕೋ-ಅಪರೇಟಿವ್ ಬ್ಯಾಂಕ್ ನಿಯಮಿತ ಇದರ 2023-2028ನೆ ಸಾಲಿಗೆ ಹಾಲಿ ಅಧ್ಯಕ್ಷ ಅನಿಲ್ ಲೋಬೊ ನೇತೃತ್ವದ ತಂಡವು ಅವಿರೋಧವಾಗಿ ಪುನರಾಯ್ಕೆಗೊಂಡಿದೆ.

ಆ.13ರಂದು ನಾಮಪತ್ರ ಸಲ್ಲಿಕೆಯೊಂದಿಗೆ ಆರಂಭಗೊಂಡ ಚುನಾವಣಾ ಪ್ರಕ್ರಿಯೆಗೆ 14 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಆ.20ರಂದು ನಾಮಪತ್ರ ಪರಿಶೀಲನೆಯಲ್ಲಿ ಎಲ್ಲಾ 14 ಅರ್ಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳು ಕ್ರಮಬದ್ಧವಾಗಿರುವುದರಿಂದ ರಿಟರ್ನಿಂಗ್ ಅಧಿಕಾರಿ ಸುಧೀರ್ ಕುಮಾರ್ ಜೆ ಅವರು ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳನ್ನು ಚುನಾಯಿತರೆಂದು ಘೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಗಳೂರು ಕಥೋಲಿಕ್ ಕೊ-ಅಪರೇಟಿವ್ ಬ್ಯಾಂಕ್ (ಎಂ.ಸಿ.ಸಿ. ಬ್ಯಾಂಕ್) ಇದರ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ, ಆ.27ರಂದು ನಡೆಯಬೇಕಿದ್ದ ಚುನಾವಣೆ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ತಿಳಿಸಿದ್ದಾರೆ.

ಈ ಮೂಲಕ 111 ವರ್ಷಗಳ ಇತಿಹಾಸವಿರುವ ಮಂಗಳೂರಿನ ಸಹಕಾರಿ ರಂಗದ ಮುಂಚೂಣಿಯ ಎಂಸಿಸಿ ಬ್ಯಾಂಕಿನ ಚುಕ್ಕಾಣಿ, ಮುಂದಿನ 5 ವರ್ಷಗಳ ಅವಧಿಗೆ ಹಾಲಿ ಅಧ್ಯಕ್ಷ  ಅನಿಲ್ ಲೋಬೊ ನೇತೃತ್ವದ ತಂಡದ ಪಾಲಾಗಿದೆ. 111 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬ್ಯಾಂಕಿನ ನಿರ್ದೇಶಕ ಮಂಡಳಿಯ ಆಯ್ಕೆ ಅವಿರೋಧವಾಗಿ ನಡೆದಿದ್ದು, ವೆಲೆನ್ಸಿಯಾ ನಿವಾಸಿ ಅನಿಲ್ ಲೋಬೊ ನೇತೃತ್ವದ ತಂಡದಲ್ಲಿ ಜೆರಾಲ್ಡ್ ಪಿಂಟೋ, ಕಲ್ಯಾಣ್‌ಪುರ, ರೋಶನ್ ಡಿ’ಸೋಜ ಮುಡಿಪು, ಹೆರಾಲ್ಡ್ ಜೋನ್ ಮೊಂತೆರೊ, ಕೆಲರಾಯ್, ಜೋಸೆಫ್ ಎಂ.ಅನಿಲ್ ಪತ್ರಾವೊ, ದೆರೆಬೈಲ್, ಡೇವಿಡ್ ಡಿ’ಸೋಜ ಬಜ್ಪೆ, ಮೆಲ್ವಿನ್ ಅಕ್ವಿನಸ್ ವಾಸ್ ಮಂಗಳೂರು, ಜೆ.ಪಿ.ರೋಡ್ರಿಗಸ್ ಪುತ್ತೂರು, ಆಂಡ್ರು ಡಿ’ಸೋಜ ಮೂಡಬಿದ್ರಿ, ಎಲ್‌ರೊ ಕಿರಣ್ ಕ್ರಾಸ್ಟೊ ಗಂಗೊಳ್ಳಿ, ಜೆರಾಲ್ಡ್ ಜೂಡ್ ಡಿ’ಸಿಲ್ವ ಕಾರ್ಕಳ, ವಿನ್ಸೆಂಟ್ ಅನಿಲ್ ಲಸ್ರಾದೊ ಬಂಟ್ವಾಳ, ಐರಿನ್ ರೆಬೆಲ್ಲೊ ಕುಲಶೇಖರ ಮತ್ತು ಫ್ರೀಡಾ ಫ್ಲಾವಿಯಾ ಡಿ’ಸೋಜ ಬಳ್ಕುಂಜೆ ಇದ್ದಾರೆ.

ಹಾಲಿ ಬ್ಯಾಂಕಿನ ಆಡಳಿತ ಮಂಡಳಿಯ ಅವಧಿಯು ಆ.26ರಂದು ಕೊನೆಗೊಳ್ಳಲಿದ್ದು, ನಂತರ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲಿದೆ.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News