ಬಂಟ್ವಾಳ: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಟೈಲರ್ ಬಂಧನ
ಬಂಟ್ವಾಳ: ಅಂಗಡಿಗೆ ತೆರಳಿದ್ದ 6 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಟೈಲರೊಬ್ಬನನ್ನು ಬಂಟ್ವಾಳ ಪೋಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಕಳ್ಳಿಗೆ ಗ್ರಾಮದ ನಿವಾಸಿಯಾಗಿರುವ ಧರ್ಮರಾಜ್ ಯಾನೆ ಧರ್ಮ (40) ಬಂಧಿತ ಆರೋಪಿ. ವೃತ್ತಿಯಲ್ಲಿ ಟೈಲರ್ ಕೆಲಸ ಮಾಡಿಕೊಂಡಿರುವ ಈತ, ತನ್ನ ಟೈಲರ್ ಅಂಗಡಿಯಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಬಂಟ್ವಾಳ ತಾಲೂಕಿನ ಬಿಮೂಡಾ ಗ್ರಾಮದಲ್ಲಿ ಈ ಘಟನೆ ಜುಲೈ 8ರಂದು ನಡೆದಿದ್ದು, ಈತನ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜುಲೈ 8ರ ಸಂಜೆ ಅಂಗಡಿಗೆ ತೆರಳಿದ್ದ ಬಾಲಕಿಯೊಂದಿಗೆ ಆರೋಪಿ ಧರ್ಮ, ʼನಿನಗೆ ಹೊಸ ಇಸ್ತ್ರಿ ಪೆಟ್ಟಿಗೆ ತೋರಿಸುತ್ತೇನೆ ಒಳಗೆ ಬಾʼ ಎಂದು ಪಕ್ಕದಲ್ಲೇ ಇದ್ದ ತನ್ನ ಟೈಲರ್ ಅಂಗಡಿಯೊಳಕ್ಕೆ ಕರೆದು ಲೈಂಗಿಕ ಕೃತ್ಯ ಎಸಗಿದ್ದಾನೆ. ಘಟನೆ ಬಳಿಕ ಮನೆಗೆ ತೆರಳಿದ ಬಾಲಕಿ ಈ ವಿಚಾರವನ್ನು ತಿಳಿಸಿದ್ದಾಳೆ ಎಂದು ಬಾಲಕಿಯ ಪೋಷಕರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಸಂಬಂಧಿಸಿ ಬಾಲಕಿಯ ಪೋಷಕರು ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಸೋಮವಾರ ರಾತ್ರಿಯೇ ಬಂಧಿಸಲಾಗಿದೆ. ಈ ಸಂಬಂಧ ಪೋಷಕರು ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.