ಬಂಟ್ವಾಳ: ವ್ಯಾಪಕ ಮಳೆ; ಏರಿಕೆಯಾದ ನೇತ್ರಾವತಿ ನದಿಯ ನೀರಿನ ಮಟ್ಟ,
ಬಂಟ್ವಾಳ : ಸೋಮವಾರ ರಾತ್ರಿಯಿಂದ ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಅಪಾಯದ ಮಟ್ಟ ತಲುಪುತ್ತಿದೆ. ಬಂಟ್ವಾಳದಲ್ಲಿ ಮಂಗಳವಾರ ಬೆಳಗ್ಗೆ ನೀರಿನ ಮಟ್ಟ 8.2 ಮೀ. ಗೆ ತಲುಪಿದೆ.
ಈಗಾಗಲೇ ಕೆಲವೊಂದು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನೀರಿನ ಮಟ್ಟ ಇನ್ನೂ ಹೆಚ್ಚಾದರೆ ಪ್ರವಾಹದ ಅಪಾಯದ ಸಾಧ್ಯತೆ ಹೆಚ್ಚಿದೆ.
ಬಂಟ್ವಾಳ ನಗರ ವ್ಯಾಪ್ತಿಯಲ್ಲಿ ನದಿ ನೀರು ಏರಿಕೆಯಾಗಿದ್ದು, ನದಿ ನೀರು ರಸ್ತೆಗೆ ಬಂದು ತಲುಪಿದೆ. ಪೇಟೆ ವ್ಯಾಪ್ತಿಯ ಮಕ್ಕಳು ಹೆಚ್ಚಾಗಿ ಆಟೋ ಮತ್ತು ವ್ಯಾನ್ ಗಳಲ್ಲಿ ಶಾಲೆಗೆ ತೆರಳುತ್ತಾರೆ. ನದಿಯ ತಟಗಳಲ್ಲಿರುವ ಗ್ರಾಮಾಂತರ ಪ್ರದೇಶದ ಶಾಲೆಗಳಾದ ಬಾಳ್ತಿಲ, ಪೆರ್ನೆ, ಕಡೆಶ್ವಾಲ್ಯ, ಮತ್ತು ಇನ್ನೂ ನೀರಿನ ಅಪಾಯವುಳ್ಳ ಶಾಲೆಗಳ ಸಿಆರ್ ಪಿ, ಮತ್ತು ಎಸ್.ಡಿ.ಎಂಸಿ ಸಮಿತಿಗಳಿಗೆ ತಮ್ಮ ಹಂತದಲ್ಲೇ ರಜೆ ನೀಡುವಂತೆ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಸೂಚನೆ ನೀಡಿದ್ದಾರೆ.
ಶಿಥಿಲಗೊಂಡ ಗೋಡೆಯಿರುವ ಕಟ್ಟಡಗಳು, ದುರ್ಬಲ ಶೀಟುಗಳು, ವಿದ್ಯುತ್ ಅಪಾಯದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಸಮರ್ಪಕವಾಗಿ ಇರುವ ತರಗತಿ ಕೊಠಡಿಗಳಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ಕೂರಿಸಬೇಕು ಎಂದು ಕ್ಲಸ್ಟರ್ ಹಾಗೂ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಿಲಾಗಿದೆ ಎಂದು ತಹಶೀಲ್ದಾರ್ ಕಛೇರಿ ಪ್ರಕಟಣೆ ತಿಳಿಸಿದೆ.
ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಪಾಣೆಮಂಗಳೂರು ಸಮೀಪದ ಆಲಡ್ಕ ಪರಿಸರದಲ್ಲಿ ಸುಮಾರು 15 ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆ ಅಂಗಡಿ ತಿಳಿಸಿದ್ದಾರೆ.