ಸರಕಾರ ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದರೆ ಅಶಾಂತಿ ಖಂಡಿತ: ನಳಿನ್ ಕುಮಾರ್

Update: 2023-06-27 10:42 GMT

ಮಂಗಳೂರು, ಜೂ.26: ರಾಜ್ಯದಲ್ಲಿ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಅಶಾಂತಿ ನಿರ್ಮಾಣ ಖಂಡಿತ ಎಂದು ದ.ಕ. ಸಂಸದ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ ಒಂಭತ್ತು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೂತ್ ಕಾರ್ಯಕರ್ತರೊಂದಿಗೆ ಕದ್ರಿಯ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ಮಂಗಳವಾರ ‘ನನ್ನ ಬೂತ್, ಎಲ್ಲಕ್ಕಿಂತ ಬಲಿಷ್ಠ ಬೂತ್’ ಕುರಿತ ನೇರ ಸಂವಾದ ಕಾರ್ಯಕ್ರಮ ವೀಕ್ಷಣೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲು, ಜನರ ಭಾವನೆಗಳಿಗೆ ವಿರುದ್ಧವಾಗಿ ಸರಕಾರ ನಡೆದರೆ ಇಲ್ಲಿ ಅಶಾಂತಿ ನಿರ್ಮಾಣವಾಗುವುದು ಖಂಡಿತ. ಆದ್ದರಿಂದ ಸರಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಹೇಳಿದ್ದಾರೆ.

ರಾಜ್ಯ ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ಪ್ರಸ್ತಾಪ ಉಲ್ಲೇಖಿಸಿದ ಅವರು, ದೇಶದಲ್ಲಿ ಗೋ ಸಂಸ್ಕೃತಿ ಇದೆ. ಕೃಷಿ, ಜೀವನ, ಆರಾಧನೆ ಎಲ್ಲದಕ್ಕೂ ಗೋವು ಮುಖ್ಯವಾಗಿದೆ. ಗೋಸಂರಕ್ಷಣೆಯ ಉದ್ದೇಶಕ್ಕೆ ಬಿಜೆಪಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿತ್ತು. ಮಹಾತ್ಮ ಗಾಂಧಿಯೂ ಗೋ ಸಂರಕ್ಷಣೆ ಆಗಬೇಕು ಎಂದು ಹೇಳಿದ್ದರು ಎಂದರು.

ಕೆಲವು ಆಚರಣೆಯ ವೇಳೆ ಗೋ ಹತ್ಯೆ ಆಗುತ್ತದೆ. ಗೋವುಗಳ ರಕ್ಷಣೆಗಾಗಿ ನಾವು ಕಾನೂನು ತಂದಿದ್ದು, ಕಾನೂನು ಜಾರಿಯಲ್ಲಿರುವಾಗ ಗೋ ಕಳ್ಳತನ, ಗೋ ಹತ್ಯೆಗೆ ಅವಕಾಶ ನೀಡಬಾರದು. ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಗೋಹತ್ಯೆವಿಚಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ಜನರ ಆಶಯಗಳಿಗೆ ಸರಕಾರ ಗೌರವ ನೀಡಬೇಕು. ಪೊಲೀಸರೂ ಗೋ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಳಿನ್ ಕುಮಾರ್ ಆಗ್ರಹಿಸಿದರು.

ಈ ಸಂದರ್ಭ ಶಾಸಕ ವೇದವ್ಯಾಸ್ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಮತ್ತಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News