ಬಿಜೆಪಿ ವಿರುದ್ಧ ದ.ಕ ಜಿಲ್ಲಾ ಕಾಂಗ್ರೆಸ್ ಪಾದಯಾತ್ರೆ; ಕಂಕನಾಡಿ ವೃತ್ತದ ಬಳಿ ಪ್ರತಿಭಟನಾ ಸಭೆ
ಮಂಗಳೂರು, ಆ. 23: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮನೆಗೆ ಕಲ್ಲು ತೂರಾಟ ನಡೆದ ಪ್ರಕರಣವನ್ನು ವಿರೋಧಿಸಿ ದ ಕ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಐವನ್ ಡಿಸೋಜಾ ಅವರ ಮನೆಯಿಂದ ಪಾದಯಾತ್ರೆ ಹಾಗೂ ಕಂಕನಾಡಿ ವೃತ್ತದ ಬಳಿ ಪ್ರತಿಭಟನಾ ಸಭೆ ನಡೆಯಿತು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಸಹಿತ, ಜಿಲ್ಲಾ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ವೆಲೆನ್ಸಿಯಾದಿಂದ ಕಂಕನಾಡಿ ವೃತ್ತದವರೆಗೆ ಬಿಜೆಪಿ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನ ಕೂಗುತ್ತಾ ಪಾದಯಾತ್ರೆ ನಡೆಸಿದರು.
ಬಳಿಕ ಕಂಕನಾಡಿ ವೃತ್ತದ ಬ್ಯಾರಿಕೇಡ್‌ಗಳೊಂದಿಗೆ ನೂರಾರು ಸಂಖ್ಯೆಯ ಪೊಲೀಸರು ಪ್ರತಿಭಟನಾಕಾರರನ್ನು ತಡೆದಾಗ ಅಲ್ಲೇ ರಸ್ತೆಯ ಫುಟ್‌ಪಾತ್ ಬಳಿ ಪ್ರತಿಭಟನಾ ಸಭೆ ನಡೆಸಲಾಯಿತು. ಸಭೆಯನ್ನುದ್ದೇಶಿಸಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ವಕ್ತಾರ ಎಂ.ಜಿ. ಹೆಗಡೆ, ಮಾಜಿ ಶಾಸಕ ಜೆ.ಆರ್. ಲೋಬೋ, ಮುಖಂಡರಾದ ಪಿ.ವಿ. ಮೋಹನ್, ದೇವಿಪ್ರಸಾದ್ ಶೆಟ್ಟಿ, ಐವನ್ ಲೋಬೋ, ಮೊದಲಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಪದ್ಮರಾಜ್, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಅಪ್ಪಿ, ವಿಶ್ವಾಸ್ ಕುಮಾರ್ ದಾಸ್, ಪ್ರವೀಣ್ ಚಂದ್ರ ಆಳ್ವ, ವಿಕಾಸ್ ಶೆಟ್ಟಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.