ದ.ಕ. : 72 ಸ್ಥಳಗಳಲ್ಲಿ ಹಸಿರು ಪಟಾಕಿ ಮಾರಾಟ
ಮಂಗಳೂರು, ಅ. 25: ತಾತ್ಕಾಲಿಕ ಪಟಾಕಿ ಮಾರಾಟ ಮಾಡುವವರು ಬಹಳಷ್ಟು ಸಂಕಷ್ಟದ ಮಧ್ಯೆ ದೀಪಾವಳಿ ಸಂದರ್ಭ ವ್ಯಾಪಾರ ನಡೆಸುತ್ತಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ 72 ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಹಸಿರು ಪಟಾಕಿ ಮಾರಾಟ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದೆ. ಯಾವುದೇ ಗೊಂದಲ ಇಲ್ಲದೆ, ಮುನ್ನೆಚ್ಚರಿಕೆ ವಹಿಸಿಕೊಂಡು ಅಲ್ಲಿ ಹಸುರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಟಾಕಿ ಮಾರಾಟಗಾರರ ಸಂಘದ ಅಧ್ಯಕ್ಷ ಆಲ್ವಿನ್ ಪಿಂಟೋ ಹೇಳಿದರು.
ಮಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.30, 31 ಹಾಗೂ ನ.1 ಹಾಗೂ 2ರಂದು ಹಾಗೂ ತುಳಸಿ ಪೂಜೆಯ ದಿನ ಮಾತ್ರ ತಾತ್ಕಾಲಿಕವಾಗಿ ಪಟಾಕಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ನೆಹರೂ ಮೈದಾನ, ಎಪಿಎಂಸಿ ಬೈಕಂಪಾಡಿ, ಉರ್ವ ಕ್ರಿಕೆಟ್ ಮೈದಾನ, ಕದ್ರಿ ಕ್ರಿಕೆಟ್ ಮೈದಾನ, ಕೃಷ್ಣಾಪುರ ಪ್ಯಾರಡೈಸ್ ಮೈದಾನ, ಅತ್ತಾವರ ನಾಯಕ್ ಮೈದಾನ, ಪದವು ಹೈಸ್ಕೂಲ್ ಮೈದಾನ, ಬೋಂದೆಲ್ ಕ್ರಿಕೆಟ್ ಮೈದಾನ, ಪಂಪ್‌ವೆಲ್ ಬಸ್‌ನಿಲ್ದಾಣಕ್ಕೆ ನಿಗದಿಯಾದ ಜಾಗ, ಶಕ್ತಿನಗರ ಮೈದಾನ, ಪಚ್ಚನಾಡಿ ಮೈದಾನ, ಎಮ್ಮೆಕೆರೆ ಮೈದಾನ, ಆದರ್ಶ ಯುವಕ ಮಂಡಲ ಮೈದಾನ ಗಣೇಶಪುರ ಸಹಿತ 13 ಮೈದಾನಗಳಲ್ಲಿ ಹಸಿರು ಪಟಾಕಿ ಮಾರಾಟ ಮಾಡಲು ಅನುಮತಿ ದೊರಕಿದೆ ಎಂದರು.
ಅಗ್ನಿಶಾಮಕದಳದ ಪೂರ್ಣ ಮಾರ್ಗದರ್ಶನ ಪಡೆದು ಜಿಲ್ಲಾಡಳಿತದಿಂದ ಅನುಮತಿ ಪಡೆದು ತಾತ್ಕಾಲಿಕ ಪಟಾಕಿ ಮಾರಾಟ ಮಾಡಲಾಗುವುದು. ನೆಹರೂ ಮೈದಾನ ಸಹಿತ ಕೆಲವು ಕಡೆ ವ್ಯಾಪಾರಕ್ಕೆ ವಿರೋಧ ಇರುವ ಬಗ್ಗೆ ಮಾಹಿತಿ ಇದೆ. ಆದರೆ, ಕ್ರೀಡಾಳುಗಳಿಗೆ ಸಮಸ್ಯೆ ಆಗದಂತೆ ಮೈದಾನದ ಬದಿಯಲ್ಲಿ ಕೇವಲ 4 ದಿನ ಮಾತ್ರ ವ್ಯಾಪಾರ ಮಾಡಲಾಗುತ್ತದೆ. ಎಲ್ಲಾ ಕಡೆಯಲ್ಲಿಯೂ ಸಾರ್ವಜನಿಕರು ಸಹಕಾರ ನೀಡುವ ವಿಶ್ವಾಸ ಇದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಟಾಕಿ ಮಾರಾಟಗಾರರ ಸಂಘದ ಕಾರ್ಯದರ್ಶಿ ಪ್ರಕಾಶ್ ಎಂ., ಖಜಾಂಚಿ ಮಧುಸೂದನ್ ಉಪಸ್ಥಿತರಿದ್ದರು.