ಕೊಟ್ಟಾರ: ರಾಜಕಾಲುವೆಗೆ ಬಿದ್ದು ಆಟೋ ಚಾಲಕ ಮೃತ್ಯು
ಮಂಗಳೂರು: ನಗರದಲ್ಲಿ ನಿರಂತರ ಸುರಿದ ಮಳೆಗೆ ಮಧ್ಯರಾತ್ರಿ ವೇಳೆಗೆ ಕೊಟ್ಟಾರ ಚೌಕಿ ಆಸುಪಾಸು ಜಲಾವೃತಗೊಂಡಿದ್ದು, ಓರ್ವ ಆಟೋ ಚಾಲಕ ಕೊಟ್ಟಾರ ಬಳಿ ರಾಜಾಕಾಲುವೆಗೆ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮೃತರನ್ನು ಕೊಟ್ಟಾರ ನಿವಾಸಿ ದೀಪಕ್ ಆಚಾರ್ಯ (44) ಎಂದು ಗುರುತಿಸಲಾಗಿದೆ. ಎಂದು ಗುರುತಿಸಲಾಗಿದೆ. ಆಟೋ ಸಹಿತ ಚಾಲಕ ನೀರಿಗೆ ಬಿದ್ದಿರುವುದು ಘಟನೆ ನಡೆದ ಸ್ವಲ್ಪ ಹೊತ್ತಿನ ಬಳಿಕ ಬೆಳಕಿಗೆ ಬಂದಿದೆ.
ಕೂಡಲೇ ಅಗ್ನಿಶಾಮಕ ದಳದ ನೆರವಿನೊಂದಿಗೆ ಕಾಯಾಚರಣೆ ನಡೆಸಲಾಯಿತಾದರೂ ದೀಪಕ್ ಅಷ್ಟು ಹೊತ್ತಿಗೆ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದೆ. ಶನಿವಾರ ಬೆಳಿಗ್ಗೆ 8.30ರವರೆಗೆ 24 ಗಂಟೆಗಳಲ್ಲಿ ಮೂಲ್ಕಿ ತಾಲ್ಲೂಕಿನ ಪಡುಪಣಂಬೂರಿನಲ್ಲಿ 19.20 ಸೆಂ.ಮೀ., ಕಿಲ್ಪಾಡಿಯಲ್ಲಿ 13.35, ಕೆಮ್ರಾಲ್‌ನಲ್ಲಿ 8.95, ಮಂಗಳೂರು ತಾಲ್ಲೂಕಿನ ಚೇಳಾಯ್ರುವಿನಲ್ಲಿ 13.30, ಬಾಳದಲ್ಲಿ 12.75, ಶಿರ್ತಾಡಿಯಲ್ಲಿ 10.45, ಪಡುಮಾರ್ನಾಡುವಿನಲ್ಲಿ 10.20, ಬೆಳುವಾಯಿಯಲ್ಲಿ 9.75, ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರಿನಲ್ಲಿ 8.85 ಹಾಗೂ ಬೆಳ್ತಂಗಡಿ ತಾಲ್ಲೂಕಿನ ಹೊಸಂಗಡಿಯಲ್ಲಿ 8.65 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.