ವಿಶ್ವಾಸ ಭರಿತ ರಾಷ್ಟ್ರ ಕಟ್ಟುವ ಗುರಿ ನಮ್ಮದಾಗಲಿ: ಸ್ಪೀಕರ್ ಯು.ಟಿ ಖಾದರ್
ಉಳ್ಳಾಲ: ಅಭಿವೃದ್ಧಿಯ ಸಮಾಜ ಹಾಗೂ ವಿಶ್ವಾಸ ಭರಿತವಾದ ರಾಷ್ಟ್ರವನ್ನು ಕಟ್ಟುವ ಉದ್ದೇಶ ನಮ್ಮದಾಗಬೇಕು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ 75ನೇ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಪ್ರತಿಮೆಗೆ ಪುಷ್ಪಾರ್ಚನೆಗೈದ ಬಳಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಭಾರತಕ್ಕೆ ಸ್ವಾಂತಂತ್ರ್ಯ ಕೊಟ್ಟರೆ ಅದನ್ನು ಅವರಿಗೆ ನಿಭಾಯಿಸಲು ಸಾಧ್ಯ ಇಲ್ಲ ಎಂದು ಬ್ರಿಟಿಷರು ಹೇಳಿದ್ದರು. ಮಹಾತ್ಮ ಗಾಂಧೀಜಿಯವರ ಮೂಲಕ ಸ್ವಾಂತಂತ್ರ್ಯ ಪಡೆದ ಭಾರತ ಬ್ರಿಟಿಷರು ಏನು ಸಾಧ್ಯ ಇಲ್ಲ ಅಂದಿದ್ದಾರೆಯೋ ಅದನ್ನು ಸಾಧಿಸಿದೆ. ಬ್ರಿಟಿಷರು ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಸಾಧ್ಯ ವಾಗಿಸಲು ಅಂಬೇಡ್ಕರ್ ಅವರ ಸಂವಿಧಾನ ಕೂಡಾ ಒಂದು ಕಾರಣವಾಗಿದೆ. ದೇಶದ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು ನಿರ್ಭಯವಾಗಿ ಒಬ್ಬಂಟಿಯಾಗಿ ಕಾಶ್ಮೀರ ದಿಂದ ಕನ್ಯಾಕುಮಾರಿ ವರೆಗೆ ಓಡಾಡಲು ಧೈರ್ಯ ಬಂದಿರುವುದು ಬಿ. ಆರ್ ಅಂಬೇಡ್ಕರ್ ಬರೆದ ಸಂವಿಧಾನದಿಂದ ಆಗಿದೆ. ಇದನ್ನು ಹಿಡಿದುಕೊಂಡು ದೇಶದೆಲ್ಲೆಡೆ ಸಂಚರಿಸುತ್ತಾರೆ. ಈ ಸಂವಿಧಾನ ವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಕಾರ್ಯಕ್ರಮದ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಉಳ್ಳಾಲ ತಾಲೂಕು, ನಗರ ಸಭೆ, ಸೋಮೇಶ್ವರ ಪುರಸಭೆ, ಕೋಟೆಕಾರ್ ಪಟ್ಟಣ ಪಂಚಾಯತ್ ಹಾಗೂ ವಿವಿಧ ಶಾಲಾ ಕಾಲೇಜುಗಳ ಸಹಭಾಗಿತ್ವದಲ್ಲಿ 75ನೇ ಗಣ ರಾಜ್ಯೋತ್ಸವದ ಪ್ರಯುಕ್ತ ಉಳ್ಳಾಲದಿಂದ ಓವರ್ ಬ್ರಿಡ್ಜ್ ವರೆಗೆ ಮೆರವಣಿಗೆ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ತಹಶೀಲ್ದಾರ್ ಪುಟ್ಟ ರಾಜು, ನಗರ ಸಭೆ ಪೌರಾಯುಕ್ತೆ ವಾಣಿ ಆಳ್ವ, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತಡಿ, ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ ಮಯ್ಯ, ತಾಲೂಕು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ರಫೀಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್,ಮುಸ್ತಫಾ ಹರೇಕಳ ಮತ್ತಿತರರು ಉಪಸ್ಥಿತರಿದ್ದರು.
ತ್ಯಾಗಂ ಹರೇಕಳ, ಕೆಎಂಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.