ಮಂಗಳೂರು: ಬಿಸಿಸಿಐ ವತಿಯಿಂದ ಡಾ.ಯು.ಟಿ. ಇಫ್ತಿಕಾರ್ ಅಲಿಗೆ ಸನ್ಮಾನ
ಮಂಗಳೂರು: ದಿ ನ್ಯಾಶನಲ್ ಕಮಿಷನ್ ಫಾರ್ ಅಲ್ಲೈಡ್ ಆ್ಯಂಡ್ ಹೆಲ್ತ್‌ಕೇರ್ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಪ್ರೊ.ಡಾ.ಯು.ಟಿ. ಇಫ್ತಿಕಾರ್ ಅಲಿ ಅವರಿಗೆ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಡಾ.ಯು.ಟಿ. ಇಫ್ತಿಕಾರ್ ಅಲಿ ಹೆಲ್ತ್‌ಕೇರ್‌ಗೆ ಸಂಬಂಧಿಸಿದ 54 ಕೋರ್ಸ್‌ಗಳನ್ನು ಒಂದೇ ಕೌನ್ಸಿಲ್‌ನಡಿ ತರಲಾಗಿದೆ. ಈ ಕೌನ್ಸಿಲ್‌ನ ಅಧ್ಯಕ್ಷತೆಗೆ ಹಲವರ ಹೆಸರು ಕೇಳಿ ಬಂದಿತ್ತು. ಅಂತಿಮವಾಗಿ ಸರಕಾರ ನನ್ನನ್ನು ನೇಮಿಸಿದೆ. ಇದರ ಆದೇಶ ಹೊರಬೀಳುವವರೆಗೂ ನನ್ನಣ್ಣ ಸ್ಪೀಕರ್ ಯು.ಟಿ.ಖಾದರ್ ಅವರಿಗೂ ತಿಳಿದಿರಲಿಲ್ಲ. ಬಳಿಕ ನಾನು ಅವರ ಗಮನಕ್ಕೆ ತಂದೆ. ನನಗೆ ಎಲ್ಲಾ ಸರಕಾರಿ ಸೌಲಭ್ಯವಿದೆ. ಬೆಂಗಳೂರಿನಲ್ಲಿ ಸರಕಾರಿ ಕಚೇರಿ ಹೊರತುಪಡಿಸಿ ಬೇರೆ ಏನನ್ನೂ ನಾನು ಸ್ವೀಕರಿಸುತ್ತಿಲ್ಲ. ಅರ್ಹರಿಗೆ ನನ್ನಿಂದಾದಷ್ಟು ಮಟ್ಟಿಗೆ ಸಹಾಯ ಮಾಡಲು ಸಿದ್ಧನಿದ್ದೇನೆ ಎನ್ನುತ್ತಾ ಭಾವುಕರಾದರು.
ಅಲ್ಪಸಂಖ್ಯಾತರಿಗೆ ಸೇರಿದ ಹಲವು ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿ ಕೇರಳ-ಕರ್ನಾಟಕ ಸಹಿತ ಶೇ. 90ರಷ್ಟು ಅಲ್ಪಸಂಖ್ಯಾತರು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳು ಹೊಸ ಕೋರ್ಸ್‌ಗಳನ್ನು ಆರಂಭಿಸಲು ಇರುವ ಅವಕಾಶವನ್ನು ಬಳಸಬೇಕು ಎಂದು ಪ್ರೊ. ಡಾ.ಯು.ಟಿ. ಇಫ್ತಿಕಾರ್ ಅಲಿ ಹೇಳಿದರು.
ಅಭಿನಂದಿಸಿ ಮಾತನಾಡಿದ ಯೆನೆಪೊಯ ವಿವಿ ಕುಲಾಧಿಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ ಸುಸಂಸ್ಕೃತ ಕುಟುಂಬದಲ್ಲಿ ಹುಟ್ಟಿ ಬೆಳೆದ ಇಫ್ತಿಕಾರ್ ಅಲಿ ಶ್ರಮಜೀವಿಯಾಗಿದ್ದಾರೆ. ಪ್ರತಿಭಾವಂತರೂ ಆಗಿರುವ ಇಫ್ತಿಕಾರ್ ಅಲಿ ಹಿರಿಯರು, ಕಿರಿಯರು ಎನ್ನದೆ ಎಲ್ಲರ ಸ್ನೇಹ ಸಂಪಾದಿಸಿದ್ದಾರೆ. ವೈದ್ಯಕೀಯ ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಮಂದಿಗೆ ನೆರವು ನೀಡುತ್ತಿದ್ದಾರೆ. ಅವರ ಈ ಯಶಸ್ಸಿನ ಹಿಂದೆ ಅವರ ಪತ್ನಿ ಮತ್ತು ಕುಟುಂಬದ ಸಹಕಾರವೂ ಇದೆ. ಯುವ ಸಮೂಹಕ್ಕೆ ಇಫ್ತಿಕಾರ್ ಅಲಿ ರೋಲ್ ಮಾಡೆಲ್ ಆಗಿದ್ದಾರೆ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಯುವ ನಾಯಕ ಇಫ್ತಿಕಾರ್ ಅಲಿಗೆ ಒಳ್ಳೆಯ ಭವಿಷ್ಯವಿದೆ. ಇಫ್ತಿಕಾರ್‌ರ ಅಣ್ಣ ಯು.ಟಿ.ಖಾದರ್ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ನಮಗಿದೆಯೋ ಅದೇ ರೀತಿ ಇಫ್ತಿಕಾರ್ ಅಲಿ ಕೂಡ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಚುನಾಯಿತರಾಗಬೇಕು. ಅದಕ್ಕಾಗಿ ನಾವೆಲ್ಲರೂ ಪ್ರಯತ್ನಿಸಬೇಕು.ಅದರೊಂದಿಗೆ ಮುಸ್ಲಿಂ ಸಮುದಾಯಕ್ಕೆ ಪ್ರಬಲ ನಾಯಕರೊಬ್ಬರ ಅಗತ್ಯವಿದೆ. ಅದನ್ನು ಯೆನೆಪೊಯ ವಿವಿಯ ಕುಲಾಧಿಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ ವಹಿಸಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಬಿಸಿಸಿಐ ಪದಾಧಿಕಾರಿಗಳಾದ ಮನ್ಸೂರ್ ಅಹ್ಮದ್ ಆಝಾದ್, ಶೌಕತ್ ಶೌರಿ, ಮುಮ್ತಾಝ್ ಅಲಿ, ಮುಹಮ್ಮದ್ ಹಾರಿಸ್, ಅಬ್ದುಲ್ ರಝಾಕ್ ಗೋಳ್ತಮಜಲು, ಎ.ಎಚ್.ಮುಹಮ್ಮದ್, ಅಬ್ದುಲ್ಲಾ ಮೋನು, ಬದ್ರುದ್ದೀನ್ ಡೆಲ್ಟಾ, ಮುಹಮ್ಮದ್ ಅರಬಿ, ರಹೀಂ ಕರ್ನಿರೆ, ಹಮೀದ್ ಕುಳಿಯಾರ್, ಅಲ್ತಾಫ್ ಖತೀಬ್, ಎಚ್. ಮುಹಮ್ಮದ್, ಲತೀಫ್ ಮುಲ್ಕಿ, ಪಿ. ಹಾಶಿರ್, ಇಕ್ಬಾಲ್ ಅಹ್ಮದ್ ಬೆಂಗಳೂರು, ಡಾ. ಯೂಸುಫ್ ದುಬೈ, ಡಾ. ಕಾಪು ಮುಹಮ್ಮದ್, ಇಬ್ರಾಹೀಂ ಗಡಿಯಾರ್, ಇಬ್ರಾಹೀಂ ಕೋಡಿಜಾಲ್, ಹೈದರ್ ಪರ್ತಿಪ್ಪಾಡಿ, ಕೆ. ಅಶ್ರಫ್, ಅಸ್ಗರ್ ಡೆಕ್ಕನ್, ರಿಯಾಝ್ ಬಾವ ಮತ್ತಿತರರು ಉಪಸ್ಥಿತರಿದ್ದರು.
ಹಾಫಿಝ್ ಹಸನ್ ಅಶೀಕ್ ಅಬ್ದುಲ್ಲಾ ಕಿರಾಅತ್ ಪಠಿಸಿದರು. ಬಿಸಿಸಿಐ ಸಂಘಟನಾ ಕಾರ್ಯದರ್ಶಿ ನಿಸಾರ್ ಫಕೀರ್ ಮುಹಮ್ಮದ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.