ಮಂಗಳೂರು| ವಿದ್ಯಾರ್ಥಿಗಳ ಅಪಹರಣ, ಹಲ್ಲೆ ಪ್ರಕರಣ: ಮೂವರ ಬಂಧನ
ಮಂಗಳೂರು: ನಗರದ ಪಾಂಡೇಶ್ವರದ ಮಾಲ್‌ವೊಂದರ ಬಳಿ ನಿಂತಿದ್ದ ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಅಪಹರಿಸಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ಬುಧವಾರ ಬಂಧಿಸಿದ್ದಾರೆ.
ಬಂಧಿತರನ್ನು ದಿಯಾನ್, ಅಫ್ನಾನ್, ಸಲ್ಮಾನ್ ಎಂದು ಗುರುತಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾ ಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆ.14ರಂದು ನೆಹರೂ ಮೈದಾನದಲ್ಲಿ ನಡೆದ ಫುಟ್ಬಾಲ್ ಪಂದ್ಯಾಟಕ್ಕೆ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಆ.19ರಂದು ಸಂಜೆ ಪಾಂಡೇಶ್ವರದಲ್ಲಿ ನಿಂತಿದ್ದ ಅಪ್ರಾಪ್ತ ವಯಸ್ಸಿನ ಮೂವರು ವಿದ್ಯಾರ್ಥಿಗಳನ್ನು ತಂಡವೊಂದು ಕಾರಿನಲ್ಲಿ ಅಪಹರಿಸಿ ಅರೆಬೆತ್ತಲೆಗೊಳಿಸಿ ಅಮಾನುಷ ವಾಗಿ ಹಲ್ಲೆ ನಡೆಸಿ, ಕೈಮುಗಿದು ಕ್ಷಮೆ ಕೇಳುವಂತೆ ಒತ್ತಾಯಿಸಿತ್ತು. ದುಷ್ಕರ್ಮಿಗಳು ತಾವು ಹಲ್ಲೆ ನಡೆಸಿದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಯಬಿಟ್ಟಿದ್ದರು.
ಕೃತ್ಯ ಬೆಳಕಿಗೆ ಬಂದೊಡನೆ ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಅದರಂತೆ ವಿದ್ಯಾರ್ಥಿಗಳಾದ ದಿಯಾನ್, ಅಫ್ನಾನ್, ಸಲ್ಮಾನ್‌ರನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಅಪ್ರಾಪ್ತ ವಯಸ್ಕರ ಸಹಿತ ಇನ್ನೂ ಕೆಲವರು ಭಾಗಿಯಾಗಿದ್ದು. ಅವರನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.