ಮುಲ್ಕಿ: ಅತಿ ವೇಗ, ನಿರ್ಲಕ್ಷ್ಯದ ಚಾಲನೆಯಿಂದ ಸರಣಿ ಅಪಘಾತ; ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಹಿತ ಇಬ್ಬರಿಗೆ ಗಾಯ
ಮುಲ್ಕಿ: ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಲಾರಿಯೊಂದು ಹೆದ್ದಾರಿ ಬಿಟ್ಟು ಡಿವೈಡರ್ ಮೇಲೇರಿ ಸರ್ವಿಸ್ ರಸ್ತೆಗಿಳಿದು ಪೊಲೀಸ್ ಸಿಬ್ಬಂದಿ, ಸ್ಕೂಟರ್ , ಹಾಗೂ ಆಟೋ ಗೆ ಢಿಕ್ಕಿ ಹೊಡೆದ ಘಟನೆ ಮುಲ್ಕಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಅಪಘಾತದಿಂದ ಸ್ಕೂಟರ್ ಸವಾರ ಉತ್ತರ ಕರ್ನಾಟಕ ಮೂಲದ ಬಪ್ಪನಾಡು ಬಳಿ ರೆಸಿಡೆನ್ಸಿಯೊಂದರ ವಾಚ್ ಮ್ಯಾನ್ ಸಂಗಪ್ಪ(57) ಗಂಭೀರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಾಳುಗಳಾದ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಗೀತಾ (42), ಆಟೋ ಚಾಲಕ ಧರ್ಮೇಂದ್ರ (35) ಅವರನ್ನು ಮುಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಲ್ಕಿ ಜಂಕ್ಷನ್ ಬಳಿ ಹೆದ್ದಾರಿ ಅಪಘಾತ ತಡೆಗೆ ಇರಿಸಿದ್ದ ಬ್ಯಾರಿಕೇಡ್ ಗಳನ್ನು ತಪ್ಪಿಸಲು ಯತ್ನಿಸಿ, ಲಾರಿ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ.
ಅಪಘಾತದ ಸಂದರ್ಭ ಸರ್ವಿಸ್ ರಸ್ತೆಯ ಬದಿಯಲ್ಲಿ ಕುಳಿತಿದ್ದ ಉತ್ತರ ಕರ್ನಾಟಕದ ಅನೇಕ ಕೂಲಿ ಕಾರ್ಮಿಕರು ಜೀವ ಭಯದಿಂದ ಓಡಿ ಪವಾಡ ಸದೃಶ ಪಾರಾಗಿದ್ದಾರೆ.
ಅಪಘಾತದ ರಭಸಕ್ಕೆ ಸ್ಕೂಟರ್ ಹಾಗೂ ಆಟೋಗೆ ಹಾನಿಯಾಗಿದ್ದು ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಹಾಗೂ ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯಿಂದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಮುಲ್ಕಿ ಜಂಕ್ಷನ್ ಬಳಿ ಅನೇಕ ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.