ಕೊನೆಗೂ ಚಡ್ಡಿ ಗ್ಯಾಂಗ್‌ ನ ನಾಲ್ವರ ಬಂಧನ | ಮಂಗಳೂರಿನಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಪ್ರಕರಣ

Update: 2024-07-09 17:11 GMT

ಮಂಗಳೂರು: ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲು ಗ್ರಾಮದ ಕೋಟೆಕಣಿ ಎಂಬಲ್ಲಿನ ಮನೆಯೊಂದಕ್ಕೆ ಮಂಗಳವಾರ ಮುಂಜಾವ ನುಗ್ಗಿ ಸುಲಿಗೆಗೈದಿದ್ದ ಚಡ್ಡಿ ಗ್ಯಾಂಗ್‌ನ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಲಾಗಿದೆ.

ಮಧ್ಯಪ್ರದೇಶ ರಾಜ್ಯದ ರಾಜು ಸಿಂಗ್ವಾನಿಯ (24), ಮಯೂರ್ (30), ಬಾಲಿ (22), ವಿಕ್ಕಿ (21) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಸುಲಿಗೆಗೈದ ಚಿನ್ನ ಹಾಗೂ ವಜ್ರದ ಆಭರಣ, ವಾಚ್‌ಗಳು, ಹಣವನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಕೃತ್ಯ ನಡೆದ 5 ಗಂಟೆಯೊಳಗೆ ಪೊಲೀಸರು ಚಡ್ಡಿ ಗ್ಯಾಂಗ್‌ನ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನಗರದ ಜನತೆಯ ಆತಂಕ ಕೊಂಚಮಟ್ಟಿಗೆ ದೂರವಾಗಿದೆ.

ಕೋಟೆಕಣಿ ಒಂದನೇ ಕ್ರಾಸ್‌ನ ಮನೆಯಲ್ಲಿ ವಿಕ್ಟರ್ ಮೆಂಡೋನ್ಸಾ ಮತ್ತು ಪ್ಯಾಟ್ರಿಸಿಯಾ ಮೆಂಡೋನ್ಸಾ ವಾಸವಾಗಿದ್ದು, ಇವರ ಇಬ್ಬರು ಮಕ್ಕಳು ವಿದೇಶದಲ್ಲಿದ್ದಾರೆ. ಸುಲಿಗೆಕೋರರಿಂದ ಹಲ್ಲೆಗೊಳಗಾದ ವಿಕ್ಟರ್‌ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ಮಂಗಳವಾರ ಮುಂಜಾವ ಸುಮಾರು 4 ಗಂಟೆಗೆ ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ ಸುಮಾರು 30 ರಿಂದ 40 ವರ್ಷ ಪ್ರಾಯದ 4 ಮಂದಿ ಯುವಕರು ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯ 71ರ ಹರೆಯದ ವಿಕ್ಟರ್ ಮೆಂಡೋನ್ಸಾ ಎಂಬವರ ಮನೆಯ ಕಿಟಕಿಯ ಗ್ರಿಲ್ ತುಂಡರಿಸಿ ಒಳ ಪ್ರವೇಶಿಸಿದರು. ಅಲ್ಲದೆ ವಿಕ್ಟರ್ ಮೆಂಡೋನ್ಸಾರಿಗೆ ಕಬ್ಬಿಣದ ರಾಡಿನಿಂದ ಹಲ್ಲೆಗೈದು ತೀವ್ರ ಗಾಯವನ್ನುಂಟು ಮಾಡಿದ್ದರು. ಅವರ ಪತ್ನಿ 60ರ ಹರೆಯದ ಪ್ಯಾಟ್ರಿಸಿಯಾ ಮೆಂಡೋನ್ಸರಿಗೂ ಸ್ಕ್ರೂಡ್ರೈವರ್‌ನಿಂದ ಹೊಡೆದು ಬೊಬ್ಬೆ ಹಾಕದಂತೆ ಹಾಗೂ ಫೋನ್ ಮಾಡದಂತೆ ಬೆದರಿಸಿ ಮನೆಯಲ್ಲಿದ್ದ 3 ಮೊಬೈಲ್ ಫೋನ್‌ಗಳನ್ನು ನೆಲಕ್ಕೆ ಬಡಿದು ಜಖಂಗೊಳಿಸಿದ್ದರು. ಕಪಾಟಿನ ಲಾಕರ್ ಒಳಗೆ ಇರಿಸಿದ್ದ ಸುಮಾರು 12 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್‌ಸಂಗ್ ಮೊಬೈಲ್ ಫೋನ್ ಮತ್ತು 1 ಲಕ್ಷ ರೂ. ಮೌಲ್ಯದ 10 ಬ್ರಾಂಡೆಡ್ ವಾಚ್‌ಗಳು, 3,000 ರೂ. ನಗದನ್ನು ಸುಲಿಗೆಗೈದರು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ವಿಕ್ಟರ್ ಮೆಂಡೋನ್ಸಾ ಅವರ ಮನೆಯ ವೆರಾಂಡದಲ್ಲಿದ್ದ ಕಾರಿನಲ್ಲೇ ಚಡ್ಡಿ ಗ್ಯಾಂಗ್‌ನ ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಬಗ್ಗೆ ಪ್ಯಾಟ್ರಿಸಿಯಾ ಮೆಂಡೊನ್ಸಾ ನೀಡಿದ ದೂರಿನಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ನಡೆದ ಬಗ್ಗೆ ಮಾಹಿತಿ ಪಡೆದ ಉರ್ವ ಠಾಣೆಯ ಇನ್‌ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಸುಲಿಗೆಕೋರರಿ ಕಾರಿನೊಂದಿಗೆ ಪರಾರಿಯಾಗಿದ್ದ ಮಾಹಿತಿಯನ್ನು ನೀಡಿದರು. ಅಲ್ಲದೆ ಮುಲ್ಕಿ ಬಸ್ ನಿಲ್ದಾಣದ ಸಮೀಪ ಕಾರನ್ನು ಪತ್ತೆಮಾಡಿ ವಶಕ್ಕೆ ಪಡೆದರು. ಹಾಗೇ ಸ್ಥಳದ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ನಾಲ್ಕು ಮಂದಿ ಸಂಶಯಾಸ್ಪದ ವ್ಯಕ್ತಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು.

ಬೆಳಗಿನ ಜಾವ ಮುಲ್ಕಿ ಕಡೆಯಿಂದ ಮಂಗಳೂರಿಗೆ ಬಂದ ಬಸ್‌ಗಳ ಬಗ್ಗೆ ಪೊಲೀಸರು ಮಾಹಿತಿ ಪಡೆದರು. ಬಾಗಲಕೋಟೆ ಕಡೆಯಿಂದ ಮಂಗಳೂರಿಗೆ ಬಂದ ಸರಕಾರಿ ಬಸ್ಸಿನ ನಿರ್ವಾಹಕರು ಮುಲ್ಕಿಯಿಂದ 4 ಮಂದಿ ಹತ್ತಿದ್ದು, ಬೆಂಗಳೂರಿಗೆ ಹೋಗುವ ಬಸ್ಸಿನ ಬಗ್ಗೆ ಮಾಹಿತಿ ಕೇಳಿದ್ದ ಬಗ್ಗೆ ತಿಳಿಸಿದರು. ಅದರಂತೆ ಮಂಗಳೂರಿನಿಂದ ಬೆಂಗಳೂರಿಗೆ ಚಲಿಸಿದ ಬಸ್ಸಿನ ಬಗ್ಗೆ ವಿವರ ಪಡೆದ ಪೊಲೀಸರು ಕೆಎ-19-ಎಫ್-3575 ನಂಬ್ರದ ಬಸ್ಸಿನ ನಿರ್ವಾಹಕರನ್ನು ಸಂಪರ್ಕಿಸಿ ಸುಲಿಗೆಕೋರರು ಬಸ್ಸಿನಲ್ಲಿರು ಬಗ್ಗೆ ಖಚಿತಪಡಿಸಿಕೊಂಡರು. ತಕ್ಷಣ ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರ ಗಮನ ಸೆಳೆದ ಮಂಗಳೂರು ಪೊಲೀಸರು ಸಕಲೇಶಪುರ ಡಿವೈಎಸ್ಪಿ, ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿಯ ಸಹಕಾರದಿಂದ ಸಕಲೇಶಪುರ ಬಳಿ ಬಸ್ಸನ್ನು ತಡೆದು ನಿಲ್ಲಿಸಿ ಅದರಲ್ಲಿ ಪ್ರಯಾಣಿಸುತ್ತಿದ್ದ 4 ಮಂದಿ ಚಡ್ಡಿಗ್ಯಾಂಗ್‌ನ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಚಡ್ಡಿ ಗ್ಯಾಂಗ್‌ನ ಸದಸ್ಯರು ಮಂಗಳೂರಿನಲ್ಲಿ ಸುಲಿಗೆಗೈದಿರುವುದನ್ನು ಒಪ್ಪಿಕೊಂಡರು. ತಕ್ಷಣ ಪೊಲೀಸರು ಸುಲಿಗೆ ಮಾಡಿದ್ದ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್‌ಗಳು ಹಾಗೂ ಹಣವನ್ನು ವಶಪಡಿಸಿಕೊಂಡರು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ರ ಮಾರ್ಗದರ್ಶನದಂತೆ, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ್ ಗೋಯಲ್, ಅಪರಾಧ ವಿಭಾಗದ ಡಿಸಿಪಿ ಬಿ.ಪಿ. ದಿನೇಶ್ ಕುಮಾರ್‌ರ ನಿರ್ದೇಶನದಂತೆ, ಮಂಗಳೂರು ಕೇಂದ್ರ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ತೋರಟ್, ಉರ್ವ ಠಾಣೆಯ ನಿರೀಕ್ಷಕಿ ಭಾರತಿ ಜಿ. ಅವರ ನೇತೃತ್ವದಲ್ಲಿ ಉರ್ವ ಠಾಣೆಯ ಎಸ್ಸೈ ಹರೀಶ ಹೆಚ್.ವಿ, ಅನಿತಾ ಹೆಚ್.ಬಿ, ಎಎಸ್ಸೈ ವಿನಯ್ ಕುಮಾರ್, ವೇಣು‌ ಗೋಪಾಲ್, ಸಿಬ್ಬಂದಿಗಳಾದ ಪುಷ್ಪರಾಜ್, ಪ್ರಮೋದ್, ನಾರಾಯಣ, ಸತೀಶ್, ಪೀಟರ್, ರಾಮಚಂದ್ರ ವೆಂಕಟೇಶ್, ಅಭಿಷೇಕ್, ಪ್ರಜ್ವಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪತ್ತೆ ಕಾರ್ಯದಲ್ಲಿ ಹಾಸನ ಜಿಲ್ಲಾ ಎಸ್ಪಿ ಮುಹಮ್ಮದ್ ಸುಜೀತಾ, ಹೆಚ್ಚುವರಿ ಎಸ್ಪಿ ತಮ್ಮಯ್ಯ ಎಂ.ಕೆ, ಸಕಲೇಶಪುರ ಉಪ ವಿಭಾಗದ ಡಿವೈಎಸ್ಪಿಪ್ರಮೋದ್ ಬಿ., ಸಕಲೇಶಪುರ ನಗರ ಠಾಣೆಯ ಎಸ್ಸೈ ಪ್ರಮೋದ್ ಕೆ.ಎಸ್ ಮತ್ತು ಸಕಲೇಶಪುರ ಗ್ರಾಮಾಂತರ ಠಾಣೆಯ ಎಸ್ಸೈ ಸದಾಶಿವ ತಿಪ್ಪರೆಡ್ಡಿ, ಸಿಬ್ಬಂದಿಗಳಾದ ಖಾದರ್ ಆಲಿ, ಸುನಿಲ್, ಜಗದೀಶ್, ಯೋಗಿಶ್, ಮುಲ್ಕಿ ಠಾಣೆಯ ಎಸ್ಸೈ ವಿನಾಯಕ್ ಬಾವಿಕಟ್ಟೆ, ಸಿಬ್ಬಂದಿಗಳಾದ ಹರೀಶೇಖರ್, ಎಎಸ್ಸೈ ಕಿಶೋರ್ ಕೋಟ್ಯಾನ್, ಚಂದ್ರಶೇಖರ್, ಶಶಿಧರ್ ಸಹಕರಿಸಿದ್ದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News