ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೆರುಗು ನೀಡಿದ ವೈಭವದ ಕನ್ನಡ ಸಾಂಸ್ಕೃತಿಕ ದಿಬ್ಬಣ

Update: 2025-02-21 11:18 IST
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೆರುಗು ನೀಡಿದ ವೈಭವದ ಕನ್ನಡ ಸಾಂಸ್ಕೃತಿಕ ದಿಬ್ಬಣ
  • whatsapp icon

ಕೊಣಾಜೆ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಅತ್ಯಾಕರ್ಷಕ ಕನ್ನಡ ಸಾಂಸ್ಕೃತಿಕ ಮೆರವಣಿಗೆಗೆ ನಡೆಯಿತು.

 

ಅಸೈಗೋಳಿಯ ಕೇಂದ್ರ ಮೈದಾನದಿಂದ ಶುಕ್ರವಾರ ಬೆಳಗ್ಗೆ ಆರಂಭಗೊಂಡ ವೈಭವದ ಸಾಂಸ್ಕೃತಿಕ ಮೆರವಣಿಗೆಗೆ ಪದ್ಮಶ್ರೀ ಹರೇಕಳ ಹಾಜಬ್ಬ ಚಾಲನೆ ನೀಡಿದರು.

ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಗುರುದತ್ತ್ ಎಂ.ಎನ್. ಭುವನೇಶ್ವರಿಗೆ ಪುಪ್ಪಾರ್ಚನೆ ಸಲ್ಲಿಸಿದರು.

 

 

ಅಸೈಗೋಳಿ ಮೈದಾನದಿಂದ ಉದ್ಘಾಟನೆಗೊಂಡು ಮಂಗಳೂರು ವಿವಿ ಮಾರ್ಗದ ಮೂಲಕ ಸಾಗಿದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳ ಪ್ರದರ್ಶನಗಳೊಂದಿಗೆ ಕೀಲು ಕುದುರೆ, ಕೋಲಾಟ, ಸುಗ್ಗಿ ಕುಣಿತ, ಕಂಗೀಲು, ಯಕ್ಷಗಾನ, ಪೂಜಾ ಕುಣಿತ, ಡೊಳ್ಳು ಕುಣಿತ ಶಾಲಾ ಮಕ್ಕಳಿಂದ ಜಾನಪದ ನೃತ್ಯಗಳು, ಕುಣಿತ ಭಜನೆ, ಚೆಂಡೆ, ಡೋಲು-ಕೋಲು ಕುಣಿತ, ಕಂಸಾಲೆ, ಗೊಂಬೆ ಕುಣಿತ ಮೊದಲಾದ ತಂಡಗಳು ಮೆರವಣಿಗೆಗೆ ರಂಗು ತುಂಬಿದವು.

 

 

ಮೆರವಣಿಗೆಯು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣ ದ ವರೆಗೂ ಸಾಗಿ ಬಂದಿತು.

ಸಭಾಂಗಣದ ಬಳಿ ಕೊಣಾಜೆ ಗ್ರಾ.ಪಂ ಅಧ್ಯಕ್ಷರಾದ ಗೀತಾ ದಾಮೋದರ್ ಕುಂದರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣಗೈದರು. ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು.

 

ವಿಶ್ವ ಮಂಗಳ ಪ್ರೌಡಶಾಲೆ, ಕೊಣಾಜೆ - ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ನಡೆಯಿತು. ಧ್ವಜಾರೋಹಣದ ನಿರ್ವಹಣೆಯನ್ನು ಕೊಣಾಜೆಪದವು ಶಿಕ್ಷಕ ರಾಜೀವ ನಾಯ್ಕ ನಡೆಸಿದರು.

 

 ಸಮ್ಮೇಳನದಲ್ಲಿ ಪಟ್ಟಾಂಗ ಕಟ್ಟೆಯ ಆಕರ್ಷಣೆ

ಸಭಾಂಗಣದ ಹೊರಾಂಗಣದಲ್ಲಿ ಎಡಭಾಗದಲ್ಲಿ ಮರವೊಂದರ ಕೆಳ ಭಾಗದಲ್ಲಿ ನಿರ್ಮಿಸಲಾಗಿರುವ ಪಟ್ಟಾಂಗ ಕಟ್ಟೆಯು ವಿಶೇಷವಾಗಿ ಸಾಹಿತ್ಯಾಭಿಮಾನಿಗಳು ಸೇರಿದಂತೆ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.

ಪಟ್ಟಾಂಗ ಕಟ್ಟೆಯ ಉದ್ಘಾಟನೆಯನ್ನು ವಿದ್ಯಾರತ್ನಾ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ನೆರವೇರಿಸಿದರು. ಶುಕ್ರವಾರ ಹಾಗೂ ಶನಿವಾರ ನಡೆಯಲಿರುವ ಈ ಪಟ್ಟಾಂಗ ಕಟ್ಟೆಯಲ್ಲಿ ಅಜ್ಜಿಕತೆ, ಉತ್ತರ ಹೇಳಿ ಪುಸ್ತಕ ಗೆಲ್ಲಿ, ಗ್ರಾಮ ಪ್ರತಿಭೆಗಳ ನೃತ್ಯ,ವಿವಿದ ಲೇಖಕರೊಂದಿಗೆ ಮಾತುಕತೆ ಹೀಗೆ ಹತ್ತು ಹಲವು ಬಗೆಯ ಆತ್ಮೀಯ ಚಟುವಟಿಕೆಗಳು ನಡೆಯುತ್ತಿವೆ.

ದೈಹಿಕ ಶಿಕ್ಷಕರಾದ ರಾಜೀವ್ ನಾಯ್ಕ್, ಮೋಹನ್ ಶಿರ್ಲಾಲ್ ಹರೀಶ್ ಕುಮಾರ್, ಹರೀಶ್, ನಿವೃತ ಮುಖ್ಯೋಪಾಧ್ಯಯರಾದ ಆನಂದ ಅಸೈಗೋಳಿ, ವಸಂತ ಕೊಡಿ, ಯು.ಆರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News