‌ಪುತ್ತೂರು: ಮಹಿಳೆಯನ್ನು ಕೊಠಡಿಯಲ್ಲಿ ಕೂಡಿಹಾಕಿ ದಿಗ್ಬಂಧನ

Update: 2024-01-02 18:35 GMT

ಪುತ್ತೂರು: ಮನೆಯ ಪಕ್ಕದ ಪ್ರತ್ಯೇಕ ಕೊಠಡಿಯೊಂದರಲ್ಲಿ ವಿವಾಹಿತ ಮಹಿಳೆಯೊಬ್ಬರನ್ನು ಕೂಡಿಹಾಕಿ ದಿಗ್ಬಂಧನ ವಿಧಿಸಿದ ಘಟನೆ ಕೆಮ್ಮಿಂಜೆ ಗ್ರಾಮದ ಕಾರೆಜ ಎಂಬಲ್ಲಿ ಮಂಗಳವಾರ ಬೆಳಕಿಗೆ ಬಂದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ದಿಗ್ಭಂಧನ ಮುಕ್ತಗೊಳಿಸಿ ಚಿಕಿತ್ಸೆಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಲ್ಲಿನ ನಿವಾಸಿ ವೃತ್ತಿಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಶ್ರೀಪತಿ ಹೆಬ್ಬಾರ್ ಎಂಬವರ ಪತ್ನಿ ಆಶಾಲತಾ ಅವರನ್ನು ಮನೆಯ ಪಕ್ಕದ ಸಿಮೆಂಟ್ ಶೀಟ್ ಅಳವಡಿಸಿದ ಕಿಟಕಿ, ವಿದ್ಯುತ್ ಬೆಳಕಿನ ವ್ಯವಸ್ಥೆ ಇಲ್ಲದ ಕೋಣೆಯಲ್ಲಿ ಕಳೆದ 3 ತಿಂಗಳಿನಿಂದ ದಿಗ್ಬಂಧನದಲ್ಲಿರಿಸಲಾಗಿದೆ ಎಂದು ಕರೆ ಬಂದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರ ತಂಡ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಮಹಿಳೆ ಎದ್ದು ನಡೆಯಲಾರದ ಮತ್ತು ಸರಿಯಾಗಿ ಮಾತನಾಡಲಾಗದ ಸ್ಥಿತಿಯಲ್ಲಿದ್ದರು. ಬಳಿಕ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಮಹಿಳೆಯನ್ನು ದಿಗ್ಬಂಧನದಿಂದ ರಕ್ಷಿಸಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶ್ರೀಪತಿ ಹೆಬ್ಬಾರ್ ಅವರ ಮನೆಯಲ್ಲಿದ್ದ ಅವರ ಸಹೋದರಿಯನ್ನು ಅಧಿಕಾರಿಗಳು ವಿಚಾರಿಸಿದಾಗ ಆಕೆ ಪ್ರೇತ ಮೈಮೇಲೆ ಬರುವ ಕಾರಣಕ್ಕಾಗಿ ದಿಗ್ಭಂಧನದಲ್ಲಿಸಿರುವುದಾಗಿ ತಿಳಿಸಿದ್ದರು. ಅಧಿಕಾರಿಗಳು ಶ್ರೀಪತಿ ಹೆಬ್ಬಾರ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದರೂ, ಅವರು ಕರೆ ಸ್ವೀಕರಿಸಿಲ್ಲ ಎಂಬ ಮಾಹಿತಿ ಲಭಿಸಿದೆ.

ದಿಗ್ಭಂಧನದಲ್ಲಿದ್ದ ಮಹಿಳೆಯ ಗಂಡ ಮತ್ತು ಆತನ ಸಹೋದರಿ ಇದೇ ಮನೆಯಲ್ಲಿ ವಾಸವಾಗಿದ್ದು, ಮಹಿಳೆಯನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡಿಹಾಕಿ ದಿಗ್ಬಂಧನಕ್ಕೆ ಒಳಪಡಿಸಿದ ಕಾರಣ ತಿಳಿಯಲಾಗುತ್ತಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಡುಗೆ ವೃತ್ತಿ ಮಾಡುತ್ತಿದ್ದ ಶ್ರೀಪತಿ ಹೆಬ್ಬಾರ್ ಅವರು ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ನಿವಾಸಿ ಆಶಾಲತಾರನ್ನು ವಿವಾಹವಾಗಿದ್ದರು. ಅವರಿಗೆ ಈಗ 9 ವರ್ಷ ಪ್ರಾಯದ ಪುತ್ರಿ ಇದ್ದಾಳೆ. ಆಶಾಲತಾ ಅವರ ಮೈಮೇಲೆ ಪ್ರೇತ ಬರುತ್ತದೆ ಎಂಬ ಕಾರಣದ ಹಿನ್ನಲೆಯಲ್ಲಿ ಆಕೆಯನ್ನು ಮನೆಯ ಪಕ್ಕದ ಗೂಡಿನಂತಿರುವ ಕೊಠಡಿಯಲ್ಲಿ ಕೂಡಿ ಹಾಕಿ ದಿನವೊಂದಕ್ಕೆ ಒಂದು ಬಾರಿ ಮಾತ್ರ ಹಾಲು ಬಳಸದ ಚಹಾ ಮತ್ತು ಬಿಸ್ಕೇಟ್ ಮಾತ್ರ ನೀಡಲಾಗುತ್ತಿತ್ತು. ಕಳೆದ ಮೂರು ತಿಂಗಳಿನಿಂದ ಈ ರೀತಿ ದಿಗ್ಭಂಧನದಲ್ಲಿರಿಸಿ ಚಿತ್ರಹಿಂಸೆ ನೀಡಲಾಗುತ್ತಿತ್ತು ಎಂಬ ಮಾಹಿತಿ ಅಧಿಕಾರಿಗಳಿಗೆ ವಿಚಾರಣೆಯ ವೇಳೆ ಲಭಿಸಿದೆ.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News