ದ.ಕ ಜಿಲ್ಲೆಯಲ್ಲಿ ಕಡಿಮೆಯಾದ ಮಳೆ ಅಬ್ಬರ; ನದಿಗಳಲ್ಲಿ ತಗ್ಗಿದ ನೀರಿನ ಮಟ್ಟ
Update: 2024-07-20 08:42 GMT
ಮಂಗಳೂರು, ಜು. 20: ದ.ಕ. ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ವ್ಯಾಪಕವಾಗಿದ್ದ ಮಳೆ ಅಬ್ಬರ ಶನಿವಾರ ಮುಂಜಾನೆಯಿಂದ ಏಕಾಏಕಿಯಾಗಿ ತಗ್ಗಿದೆ. ನೇತ್ರಾವತಿ, ಕುಮಾರಧಾರ ಸೇರಿದಂತೆ ಜಿಲ್ಲೆಯ ಜೀವನದಿಗಳಲ್ಲಿ ನೀರಿನ ಮಟ್ಟವೂ ಇಂದು ಮಧ್ಯಾಹ್ನದ ವೇಳೆಗೆ ಇಳಿಕೆಯಾಗಿದೆ.
ನೇತ್ರಾವತಿ ನದಿಯು ಬಂಟ್ವಾಳ ಭಾಗದಲ್ಲಿ ಶುಕ್ರವಾರ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದರೆ, ಇಂದು ಬೆಳಗ್ಗೆ 7.4 ಮೀಟರ್‌ಗೆ ಇಳಿಕೆಯಾಗಿದೆ.
ಕಳೆದ ಕೆಲವು ದಿನಗಳಿಂದ ಅವ್ಯಾಹತವಾಗಿ ಸುರಿಯುತ್ತಿದ್ದ ಮಳೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಾದ್ಯಂತ ಶನಿವಾರ ಶಾಲೆಗಳು ಹಾಗೂ ಪಿಯು ಕಾಲೇಜುವರೆಗೆ ರಜೆ ನೀಡಲಾಗಿದೆ. ಆದರೆ ಶುಕ್ರವಾರ ರಾತ್ರಿಯಿಂದಲೇ ಮಳೆ ಕಡಿಮೆಯಾಗಿದ್ದು, ಶನಿವಾರ ಮಧ್ಯಾಹ್ನದ ವೇಳೆಗೆ ತುಸು ಬಿಸಿಲಿನ ವಾತಾವರಣ ಕಂಡು ಬಂದಿದೆ.