ಸೌದಿ ಅರಬಿಯ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಳೆಯಂಗಡಿಯ ಮೂವರ ಅಂತ್ಯ ಸಂಸ್ಕಾರ

Update: 2024-03-23 05:30 GMT

ಮುಲ್ಕಿ, ಮಾ.23: ಖತರ್ ನಿಂದ ಉಮ್ರಾ ಯಾತ್ರೆ ಹೊರಟಿದ್ದ ಕಾರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದ ಹಳೆಯಂಗಡಿಯ ಒಂದೇ ಕುಟುಂಬದ ಮೂವರ ಅಂತಿಮ ಸಂಸ್ಕಾರ ರಿಯಾದ್ ಮತ್ತು ತಾಯಿಫ್ ನಡುವಿನ ಉಮ್ಮುಲ್ ಹಮ್ಮಾಮ್ ನ ಕಿಂಗ್ ಖಾಲಿದ್ ಗ್ರ್ಯಾಂಡ್ ಮಸೀದಿಯ ದಫನ ಭೂಮಿಯಲ್ಲಿ ಶುಕ್ರವಾರ ನೆರವೇರಿತು.

ಈ ಸಂದರ್ಭ ಮೃತಪಟ್ಟಿರುವ ಹಿಬಾ ಅವರ ತಂದೆ ಮುಹಮ್ಮದ್ ಶಮೀಮ್, ಚಿಕ್ಕಪ್ಪ ಲತೀಫ್, ರಮೀಝ್ ಅವರ ತಂದೆ ತಾಯಿ ಹಾಗೂ ಕುಟುಂಬ ಸದಸ್ಯರು ಭಾಗವಹಿಸಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಾ.20ರಂದು ರಾತ್ರಿ ರಿಯಾದ್-ತಾಯಿಫ್ ಹೆದ್ದಾರಿಯಲ್ಲಿ ಸಂಭವಿಸಿದ ಈ ರಸ್ತೆ ಅಪಘಾತದಲ್ಲಿ ಮೂಲತಃ ಹಳೆಯಂಗಡಿ 10ನೇ ತೋಕೂರು ನಿವಾಸಿ ಹಿಬಾ (29), ಅವರ ಪತಿ ಮುಂಬೈ ಮೂಲದ ಮುಹಮ್ಮದ್ ರಮೀಝ್(34) ಮತ್ತು ಪುತ್ರಿ ರಾಹ (3ತಿಂಗಳು) ಮೃತಪಟ್ಟಿದ್ದಾರೆ. ಹಿಬಾ ಅವರ ಹಿರಿಯ ಪುತ್ರ 3 ವರ್ಷದ ಹಾರೂಶ್ (3) ಗಂಭೀರವಾಗಿ ಗಾಯಗೊಂಡಿದ್ದಾನೆ. ಅದೇರೀತಿ ಅವರ ಚಿಕ್ಕಪ್ಪ ಲತೀಫ್ ಅವರ ಪುತ್ರಿ ಫಾತಿಮಾ(19) ಸ್ಥಿತಿ ಕೂಡಾ ಚಿಂತಾಜನಕವಾಗಿದೆ. ಇವರಿಬ್ಬರನ್ನು ರಿಯಾದ್ ನ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.

ಇವರು ಇತ್ತೀಚೆಗಷ್ಟೇ ಹಳೆಯಂಗಡಿಯಿಂದ ಖತರ್ ನಲ್ಲಿರುವ ತಮ್ಮ ದೊಡ್ಡಪ್ಪನ ಮನೆಗೆ ಹೋಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ವೈರಲ್: ಕುಟುಂಬಸ್ಥರ ಅಸಮಾಧಾನ

ಅಪಘಾತ ನಡೆದ ಬಳಿಕ ಕೆಲವು ಸುದ್ದಿವಾಹಿನಿಗಳು ಅಪಘಾತಕ್ಕೀಡಾಗಿದ್ದ ಯಾವುದೋ ಒಂದು ಕಾರಿನ ಚಿತ್ರ ಬಳಸಿ ಸುದ್ದಿಗಳನ್ನು ಪ್ರಕಟಿಸಿವೆ. ಅದೇರೀತಿ, ಸಾಮಾಜಿಕ ಜಾಲತಾಣದಲ್ಲಿ ಅಪಘಾತದ ಕುರಿತು ಸುಳ್ಳು ಸುದ್ದಿಗಳನ್ನು ಹರಡಲಾಗಿದೆ. 4 ವರ್ಷದ ಹಿಂದೆ ನಡೆದಿತ್ತೆನ್ನಲಾದ ಕೇರಳ‌ ಮೂಲದ ತಾಯಿ ಮಗುವಿನ ಅಂತಿಮ ಅಂಸ್ಕಾರದ ವೀಡಿಯೊಗಳನ್ನು 'ತಾಯಿಫ್ ನಲ್ಲಿ ಅಪಘಾತಕ್ಕೀಡಾದ ಹಳೆಯಂಡಿಯ ಕುಟುಂಬದ ವೀಡಿಯೊ' ಎಂದೆಲ್ಲಾ ಬರೆದು ವೈರಲ್ ಮಾಡಲಾಗಿದೆ ಎಂದು ಮೃತ ಹಿಬಾ ಅವರ ಸಹೋದರ ಸಂಬಂಧಿ ಮಮ್ತಾಝ್ ಅಲಿ ಬೇಸರ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News