ಸೌಜನ್ಯ ಪ್ರಕರಣ | ಮೇಲ್ಮನವಿ ಸಲ್ಲಿಸುವ ಬಗ್ಗೆ ಪರಿಶೀಲನೆ: ಸಿಎಂ ಸಿದ್ದರಾಮಯ್ಯ

Update: 2023-08-01 08:25 GMT

ಮಂಗಳೂರು, ಆ.1: 'ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಿಬಿಐ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ಅವರ ಪೋಷಕರು ಹಾಗೂ ಹೋರಾಟಗಾರರು ಈ ಪ್ರಕರಣದ ಮರುತನಿಖೆಗೆ ಒತ್ತಾಯಿಸಿದ್ದಾರೆ. ಕಾನೂನಿನ ಪ್ರಕಾರ ಏನು ಕ್ರಮ ಕೈಗೊಳ್ಳಬಹುದೆಂದು ವಿಚಾರ ಮಾಡಲಾಗುದು. ಕಾನೂನಿನ ಪ್ರಕಾರ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅವರು ಇಂದು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಅಧಿಕಾರಿಗಳಿಂದ ಲೋಪವಾಗಿದೆ ಎಂದು ತೀರ್ಪಿನಲ್ಲಿ ಉಲ್ಲೇಖವಿರುವ ಬಗ್ಗೆ ಉತ್ತರಿಸಿ , 'ತೀರ್ಪು ಓದಿದ ನಂತರ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೆ ಸಲ್ಲಿಸಲಾಗುವುದು' ಎಂದರು.

'ಕಾಲೇಜೊಂದರಲ್ಲಿ ಮೊಬೈಲ್ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂಪ್ರೇರ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಎಫ್ ಐ ಆರ್ ಆಗಿದೆ. ತನಿಖೆಯನ್ನು ಡಿ ವೈಎಸ್ಪಿ ಮಟ್ಟದ ಅಧಿಕಾರಿ ಮಾಡುತ್ತಿದ್ದು, ಪ್ರಕರಣವನ್ನು ಎಸ್.ಐ.ಟಿಗೆ ವಹಿಸುವ ಪ್ರಶ್ನೆ ಉದ್ಬವವಾಗುವುದಿಲ್ಲ' ಎಂದು ತಿಳಿಸಿದರು.

ಕೇಂದ್ರ ಮಹಿಳಾ ಆಯೋಗದ ಸದಸ್ಯರು ಆಗಮಿಸಿ ತನಿಖೆ ಕೈಗೊಂಡು ಕಾಲೇಜಿನ ಶೌಚಾಲಯದಲ್ಲಿ ಕ್ಯಾಮರಾ ಇರಲಿಲ್ಲ ಎಂದು ಹೇಳಿದ್ದಾರೆ. ತನಿಖೆಯಾಗಿ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

 

ನೈತಿಕ ಪೊಲೀಸ್ ಗಿರಿ: ನಿರ್ದಾಕ್ಷಿಣ್ಯ ಕ್ರಮ

ನೈತಿಕ ಪೊಲೀಸ್ ಗಿರಿ ಯಾರೇ ಮಾಡಿದರೂ ಕೂಡ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲು ತಿಳಿಸಲಾಗಿದೆ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಿಲ್ಲ ಎಂದು ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

'ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ'

ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಅಥವಾ ವ್ಯಕ್ತಿ ಯ ವಿರುದ್ಧವಾಗಿ ಅನಗತ್ಯವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಟೀಕೆ ಮಾಡಿದರೂ ಕ್ರಮ ಕೈಗೊಳ್ಳುತ್ತಿದ್ದೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಟೀಕೆ ಮಾಡಿದರೆ ಕ್ರಮ ತೆಗೆದುಕೊಳ್ಳುವುದಿಲ್ಲ. ಸುಳ್ಳು ಸುದ್ದಿ ಹಬ್ಬಿಸಿದರೆ ತೆಗೆದುಕೊಳ್ಳಲಾಗುವುದು ಎಂದರು. ಕುಟುಂಬದವರ ಮೇಲೆ ಸುಳ್ಳು ಸುದ್ದಿ ಹಬ್ಬಿಸುವುದು, ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಬೇರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News