ಸುರತ್ಕಲ್‌ : ಅಪಘಾತದ ಗಾಯಾಳು ಚಿಕಿತ್ಸೆಯ ವೇಳೆ ಮೃತ್ಯು; ವೈದ್ಯರ ನಿರ್ಲಕ್ಷ್ಯದ ಆರೋಪ, ಪ್ರತಿಭಟನೆ

Update: 2023-11-22 17:15 GMT

ಮೊಯ್ದಿನ್ ಫರ್ಹಾನ್

ಸುರತ್ಕಲ್‌ : ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕನೋರ್ವ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಮೃತ ಬಾಲಕನ ಕುಟುಂಬದವರು ಆರೋಪಿಸಿದ್ದಾರೆ. 

ಮೃತ ಬಾಲಕನನ್ನು ಹಸನ್‌ ಬಾವ ಎಂಬವರ ಪುತ್ರ ಮೊಯ್ದಿನ್ ಫರ್ಹಾನ್ (17) ಎಂದು ಗುರುತಿಸಲಾಗಿದೆ.

ಮುಕ್ಕದಲ್ಲಿ ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಅಪಘಾತ ನಡೆದಿದ್ದು, ಈ ವೇಳೆ ಗಾಯಗೊಂಡಿದ್ದ ಮೊಯ್ದಿನ್‌ ಫರ್ಹಾನ್‌ ನನ್ನು ಸುರತ್ಕಲ್‌ ನಲ್ಲಿರುವ ಅಥರ್ವ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಪಘಾತ ನಡೆದ ಬಳಿಕ ಬಾಲಕ ಮನೆಯವರು ಹಾಗು ಸ್ನೇಹಿತರೊಂದಿಗೆ ಮಾತನಾಡಿದ್ದ ಎಂದು ತಿಳಿದುಬಂದಿದ್ದು, ತುರ್ತು ಶಸ್ತ್ರಚಿಕಿತ್ಸೆ ನಡೆಸಲು ಹೇಳಿದ್ದ ವೈದ್ಯಾಧಿಕಾರಿ ಶಸ್ತ್ರ ಚಿಕಿತ್ಸೆಯ ವೇಳೆ ನೀಡಿದ್ದ ಅನಸ್ತೇಶಿಯಾ ಓವರ್ ಡೋಸ್ ನೀಡಿದ ಪರಿಣಾಮ ಬಾಲಕ ಮೃತಪಟ್ಟಿರುವುದಾಗಿ ಕುಟುಂಬದವರು ಆರೋಪ ಮಾಡಿದ್ದಾರೆ. 

ಇಂದು ಬೆಳಗ್ಗೆ 9ಕ್ಕೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಮಧ್ಯಾಹ್ನವಾದರೂ ಎಚ್ಚರಗೊಳ್ಳದ ಬಾಲಕ ನಂತರ ಮೃತಪಟ್ಟಿರುವುದಾಗಿ ಹೇಳಲಾಗಿದ್ದು, ಶಸ್ತ್ರ ಚಿಕಿತ್ಸೆಯ ನೆಪದಲ್ಲಿ ಬಾಲಕನನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ. ಈ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯನ್ನು ಖಂಡಿಸಿ ಕುಟುಂಬಸ್ಥರು ಮತ್ತು ಸಾರ್ವಜನಿಕರು ನೂರಾರು ಮಂದಿ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿ ಆಸ್ಪತ್ರೆಯ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಜನರನ್ನು ಸಮಾಧಾನ ಪಡಿಸಿ ಹತೋಟಿಗೆ ತಂದರು. 

ಘಟನಾ ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, ಜಿಲ್ಲಾಧ್ಯಕ್ಷ ಬಿ.ಕೆ. ಇಂಮ್ತಿಯಾಝ್‌, ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪುರುಶೋತ್ತಮ ಚಿತ್ರಾಪುರ ಮೊದಲಾದವರು ಭೇಟಿ ನೀಡಿ ವೈದ್ಯರ ಜೊತೆ ಸಮಾಲೋಚನೆ ನಡೆಸಿದರು. ಆಸ್ಪತ್ರೆಯ ನಿರ್ಲಕ್ಷ್ಯತನದಿಂದ ನಡೆದಿರುವ ಘಟನೆಯನ್ನು ಖಂಡಿಸಿದ ಮುಖಂಡರು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದರು.

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಅವರು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಹಾಗೂ ದ.ಕ. ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಘಟನೆಯ ಸಂಪೂರ್ಣ ಮಾಹಿತಿಯನ್ನು ನೀಡಿದರು. ಜೊತೆಗೆ ಉನ್ನತ ಮಟ್ಟದ ವೈದ್ಯರ ಸಮಿತಿ ರಚಿಸಿ ಈ ಪ್ರಕರಣದ ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿದರು.

ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಲೂರು ತಿಮ್ಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಮುಖಂಡರ ಜೊತೆ ಸಭೆ ನಡೆಸಿದರು. ಬಳಿಕ ಮತನಾಡಿದ ಅವರು, ಆಸ್ಪತ್ರೆಯಲ್ಲಿ 16 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಬಗ್ಗೆ ಆರೋಗ್ಯ ಸಚಿವರ ಕಚೇರಿಯಿಂದ ಕ್ರಮ ಕೈಗೊಳ್ಳಲು ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಬಾಲಕನ ಕುಟುಂಬಸ್ಥರು, ಮುಖಂಡರು ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಉನ್ನತ ಮಟ್ಟದ ತನಿಖೆಗೆ ಜಿಲ್ಲಾ ಸರ್ಜನ್‌ ಅವರ ನೇತೃತ್ವದಲ್ಲಿ ವಿಶೇಷ ವೈದ್ಯಾಧಿಕಾರಿಗಳ ತಂಡದಿಂದ ಬಾಲಕನ ಮರಣೋತ್ತರ ತನಿಖೆ ನಡೆಸಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆ ಬಳಿಕ ಪ್ರತಿಭಟನಾ ನಿರತರು ಹಿಂದಿರುಗಿದರು.

ಜಿಲ್ಲಾ ಸರ್ಜನ್‌ ನೇತೃತ್ವದಲ್ಲಿ 8ಮಂದಿ ವೈದ್ಯಾಧಿಕಾರಿಗಳ ತಂಡವನ್ನು ರಚಿಸಿ ಆ ಮೂಲಕ ವಿವರವಾದ ತನಿಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ತಂಡದಲ್ಲಿ 4ಮಂದಿ ಖಾಸಗಿ ಮತ್ತು 4 ಸರಕಾರಿ ತಜ್ಞ ವೈದ್ಯರು ಇರಲಿದ್ದಾರೆ. ಈ ತಂಡ ಕಾಲಮಿತಿಯಲ್ಲಿ ಪ್ರಕರಣವನ್ನು ಭೇದಿಸಿ ವರದಿ ನೀಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.‌

- ಹಾಲೂರು ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ.

‌ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬ

ಕುಳಾಯಿ ಜುಮಾ ಮಸೀದಿ ಬಳಿಯ ನಿವಾಸಿ ಹಸನ್‌ ಬಾವ ಅವರ ಮೂವರು ಮಕ್ಕಳು. ಈ ಪೈಕಿ ಮೊಯ್ದಿನ್ ಫರ್ಹಾನ್ ಪ್ರಥಮ ಮತ್ತು ಏಕೈಕ ಪತ್ರ. ಈತನಿಗೆ ಇಬ್ಬರು ತಂಗಿಯರಿದ್ದು, ಈತ ಮಂಗಳೂರಿನ ಜೆಪ್ಪಿನ ಮೊಗರು ಯೆನಪೊಯ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಒಬ್ಬನೇ ಮಗನನ್ನು ಕಳೆದು ಕೊಂಡಿ ರುವ ಕುಟುಂಬದ ರೋಧನ ಮುಗಿಲು ಮುಟ್ಟಿದೆ.

ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ 16 ವರ್ಷದ ಬಾಲಕನ ಮೃತ್ಯುವಾಗಿದೆ. ಈ ಬಗ್ಗೆ ಪಾರ್ದರ್ಶಕವಾಗಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು. ಆ ಮೂಲಕ ಮೃತ ಬಾಲಕನ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾಗಿರುವ ಗುಂಡೂರಾವ್‌ ಅವರಿಗೆ ಆಗ್ರಹಿಸಿದೇವೆ. ನಮ್ಮ ಆಗ್ರಹದಂತೆ ಸಚಿವರು ತನಿಖೆಗೆ ಸೂಚನೆ ನೀಡಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ನ್ಯಾಯ ದೊರೆಯುವ ಭರವಸೆ ಇದೆ.

-ಇನಾಯತ್‌ ಅಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ‌

ಈ ಘಟನೆಯಲ್ಲಿ ವೈದ್ಯರ ಲೋಪ ಎತ್ತಿತೋರುತ್ತಿದೆ: ಮುನೀರ್‌ ಕಾಟಿಪಳ್ಳ

ಬಾಲಕನಿಗೆ ಶಸ್ತ್ರ ಚಿಕಿತ್ಸೆಗಾಗಿ ಅನಸ್ತೇಶಿಯಾ ನೀಡಲಾಗಿದೆ. ಈ ವೇಳೆ ಅದು ರಿಯಾಕ್ಷನ್‌ ಆಗಿ ಆತನಿಗೆ ಮೂರ್ಛೆ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ. ಯಾವುದೇ ಇಂಜೆಕ್ಷನ್‌ ಗಳನ್ನು ನೀಡುವ ಮುನ್ನ ಪ್ರಾಯೋಗಿಕವಾಗಿ ನೀಡುವ ರೂಡಿ ಇದೆ. ಆದರೆ, ಇಲ್ಲಿ ಇಂತಹಾ ಯಾವುದೇ ಕ್ರಮಗಳನ್ನು ಪಾಲಿಸಿಲ್ಲ. ಜೊತೆಗೆ ಮೂರ್ಛೆ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದರೂ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ. ಇದು ವೈದ್ಯರ ಲೋಪವನ್ನು ಎತ್ತಿತೋರಿಸುತ್ತಿದೆ. ಇಂತಹಾ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ದ.ಕ. ಜಿಲ್ಲೆಯಲ್ಲಿ ಹಲವರು ಜೀವ ಕಳೆದುಕೊಂಡಿದ್ದಾರೆ. ಆಸ್ಪತ್ರೆಗಳಿಗೆ ಇದು ಮಾಮೂಲಾಗಿದ್ದು, ಆದರೆ ಮೃತರ ಕುಟುಂಬಕ್ಕೆ ಆಗುವ ಕಷ್ಟ-ನಷ್ಟಗಳ ಬಗ್ಗೆ ಅವರಿಗೆ ಅಗತ್ಯವಿಲ್ಲ. ಹೀಗಾಗಿ ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ನ್ಯಾಯಸಿಗಲೇ ಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಆಗ್ರಹಿಸಿದ್ದಾರೆ.











 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News