ಸುರತ್ಕಲ್: ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತ್ಯು

Update: 2024-02-28 03:48 GMT

ನದಿಯ ದಡದಲ್ಲಿ ಪತ್ತೆಯಾದ ಮೃತ ವಿದ್ಯಾರ್ಥಿಗಳ ಶಾಲಾ ಚೀಲಗಳು

ಸುರತ್ಕಲ್: ಇಲ್ಲಿನ ಕೊಪ್ಪಳ ಆಣೆಕಟ್ಟ ರೈಲ್ವೇ ಸೇತುವೆಯ ಕೆಳಗೆ ಈಜಲು ಬಂದಿದ್ದ ನಾಲ್ಕು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದ್ದು, ತಡರಾತ್ರಿ ಬೆಳಕಿಗೆ ಬಂದಿದೆ.

ಮೃತ ಪಟ್ಟ ಮಕ್ಕಳೆಲ್ಲರೂ ಸುರತ್ಕಲ್ ಖಾಸಗಿ ಶಾಲೆಯೊಂದರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದ್ದು, ಎಲ್ಲರ ಮೃತದೇಹಗಳನ್ನು ಸ್ಥಳೀಯರ ಸಹಕಾರದೊಂದಿಗೆ ಸುರತ್ಕಲ್ ಮತ್ತು ಮುಲ್ಕಿ ಪೊಲೀಸರು ಮೇಲೆತ್ತಿದ್ದಾರೆ.

ಮೃತ ವಿದ್ಯಾರ್ಥಿಗಳನ್ನು ಸುರತ್ಕಲ್ ಅಗರಮೇಲ್ ನಿವಾಸಿ ಚಂದ್ರಕಾಂತ ಎಂಬವರ ಮಗ ಯಶ್ವಿತ್(15), ಹಳೆಯಂಗಡಿ ತೋಕೂರು ನಿವಾಸಿ ವಸಂತ ಎಂಬವರ ಮಗ ರಾಘವೇಂದ್ರ (15), ಸುರತ್ಕಲ್ ಗುಡ್ಡೆಕೊಪ್ಲ ನಿವಾಸಿ ವಿಶ್ವನಾಥ ಎಂಬವರ ಮಗ ನಿರೂಪ (15) ಮತ್ತು ಚಿತ್ರಾಪುರ ನಿವಾಸಿ ದೇವದಾಸ್ ಎಂಬವರ ಪುತ್ರ ಅನ್ವಿತ್ (15) ಎಂದು ಗುರುತಿಸಲಾಗಿದೆ.

ಮಂಗಳವಾರ ಇಂಗ್ಲಿಷ್ ಪೂರ್ವ ಸಿದ್ಧತಾ ಪರೀಕ್ಷೆಗೆ ತೆರಳಿದ್ದ ಏಳು ಮಂದಿ ವಿದ್ಯಾರ್ಥಿಗಳು ಒಟ್ಟಿಗೆ ಹಳೆಯಂಗಡಿಗೆ ಬಂದಿದ್ದು, ಅಲ್ಲಿಂದ ಕೊಪ್ಪಳ ಅಣೆಕಟ್ಟು ರೈಲ್ವೇ ಸೇತುವೆಯ ಕೆಳಗೆ ಹೋಗಿದ್ದಾರೆ. ಈ ಪೈಕಿ ನಾಲ್ಕು ಮಂದಿ ಮಕ್ಕಳು ತಮ್ಮ ಶಾಲಾ ಚೀಲಗಳನ್ನು ನದಿಯ ದಡದಲ್ಲಿಟ್ಟು ನೀರಿನಲ್ಲಿ ಇಳಿದಿದ್ದರು. ಸ್ನೇಹಿತರು ನೀರಿನಲ್ಲಿ ಮುಳುಗುತ್ತಿದ್ದಂತೆಯೇ ಜೊತೆಗಿದ್ದ ಮೂವರು ಸ್ಥಳದಿಂದ ತಮ್ಮ ಮನೆಗಳಿಗೆ ತೆರಳಿದ್ದರು ಎನ್ನಲಾಗುತ್ತಿದೆ.

ಮಕ್ಕಳು ಕಾಣೆಯಾಗಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ವಿಚಾರಣೆ ಚುರುಕುಗೊಳಿಸಿದ ಪೊಲೀಸರು, ಶಾಲೆ, ಬಸ್ ನಿಲ್ದಾಣದ ಬಳಿಯ ಸಿಸಿ ಕ್ಯಾಮರಾಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ.

ಮಕ್ಕಳು ಸುರತ್ಕಲ್ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದು, ಹಳೆಯಂಗಡಿಯಲ್ಲಿ ಬಸ್ ಇಳಿದಿರುವುದನ್ನು ಸಿಸಿ ಕ್ಯಾಮರಾ ಮೂಲಕ ಪತ್ತೆ ಹಚ್ಚಿದ ಪೊಲೀಸರು, ಬಳಿಕ ವಿದ್ಯಾರ್ಥಿಯೋರ್ವನ ಬಳಿಯಿದ್ದ ಮೊಬೈಲ್ ಫೋನ್ ಲೊಕೇಶನ್ ಬಳಸಿ ಬಾಲಕರಿರುವ ಸ್ಥಳವನ್ನು ಧೃಢಪಡಿಸಿದ್ದಾರೆ.

ನಾಲ್ಕು ಮೃತದೇಹಗಳನ್ನು ಮರಣೋತ್ತ ಪರೀಕ್ಷೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News