ಉಳ್ಳಾಲ ದರ್ಗಾ ಕಚೇರಿಯ ಬೀಗ ತೆರವುಗೊಳಿಸಿ ವಕ್ಫ್ ಅಧಿಕಾರಿಗಳಿಂದ ಪರಿಶೀಲನೆ

Update: 2023-10-03 17:25 GMT

ಉಳ್ಳಾಲ: ಉಳ್ಳಾಲ ಜುಮಾ ಮಸೀದಿ (402) ಸಯ್ಯಿದ್ ಮದನಿ ದರ್ಗಾ ಇದರ ನೂತನ ಆಡಳಿತ ಸಮಿತಿಗೆ, ಹಿಂದಿನ ಆಡಳಿತ ಸಮಿತಿ ಮುಖ್ಯ ಕಚೇರಿಯ ಕೀ ಹಸ್ತಾಂತರ ಮಾಡದೇ ಇದ್ದುದರಿಂದ ಸದ್ರಿ ಕಚೇರಿಯನ್ನು ಮಂಗಳವಾರ ಉಳ್ಳಾಲ ತಹಶೀಲ್ದಾರ್ ಹಾಗೂ ವಕ್ಫ್ ಅಧಿಕಾರಿಗಳ ಸಮಕ್ಷಮದಲ್ಲಿ ತೆರೆದು ಪರಿಶೀಲನೆ ನಡೆಸಲಾಯಿತು.

ಈ ಸಂದರ್ಭ 38058ರೂ ನಗದು ಹಾಗೂ 2016 ವರೆಗಿನ ನಿರ್ಣಯದ ದಾಖಲೆ ಪತ್ರಗಳು ಲಭಿಸಿದೆ. ಪರಿಶೀಲನೆ ನಡೆಸಿದ ಬಳಿಕ ತಹಶೀಲ್ದಾರ್ ಪುಟ್ಟ ರಾಜು ಮಾತನಾಡಿ, 8-3-2023ರಂದು ನೂತನ ಸಮಿತಿ ಅಧಿಕಾರಕ್ಕೆ ಬಂದಿದೆ. ನೂತನ ಸಮಿತಿ ಅಧಿಕಾರ ಹಿಡಿದು ತಿಂಗಳು ಆರು ಕಳೆದರೂ ಹಿಂದೆ ಆಡಳಿತದಲ್ಲಿದ್ದ ಸಮಿತಿ ಕೊಠಡಿ ಕೀ ನೀಡಿರಲಿಲ್ಲ. ಈ ಕಾರಣದಿಂದ ಎಲ್ಲರ ಸಮಕ್ಷಮದಲ್ಲಿ ಕೊಠಡಿ ತೆರೆದು ಮಹಜರು ನಡೆಸಿದಾಗ 38058 ನಗದು ಹಾಗೂ ದಾಖಲೆ ಪುಸ್ತಕಗಳು ಲಭಿಸಿದ್ದು, ಅದನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.

ವಕ್ಫ್ ಅಧಿಕಾರಿ ಅಬೂಬಕ್ಕರ್ ಮಾತನಾಡಿ, ಮಂಗಳೂರು ಸಹಾಯಕ ಆಯುಕ್ತರ ಆದೇಶ ಮೇರೆಗೆ ಉಳ್ಳಾಲ ತಹಶೀಲ್ದಾರ್ ಹಾಗೂ ವಕ್ಫ್ ಬೋರ್ಡ್ ಅಧಿಕಾರಿಗಳು ಹೊಸದಾಗಿ ಅಧಿಕಾರಕ್ಕೆ ಬಂದ ಆಡಳಿತ ಸಮಿತಿಗೆ ಹಿಂದಿನ ಆಡಳಿತ ಸಮಿತಿ ಸದಸ್ಯರು ಕಚೇರಿ ಕೀ ಹಸ್ತಾಂತರ ಮಾಡದ ಕಾರಣ ಮುಚ್ಚಿದ್ದ ಕೊಠಡಿಯನ್ನು ಎಲ್ಲರ ಸಮಕ್ಷಮ ದಲ್ಲಿ ತೆರೆದು ಪಂಚನಾಮೆ ನಡೆಸಿ ದಾಖಲೆಗಳನ್ನು ಹೊಸ ಆಡಳಿತ ಸಮಿತಿ ಸದಸ್ಯರಿಗೆ ಹಸ್ತಾಂತರ ಮಾಡಿದ್ದೇವೆ ಎಂದು ಹೇಳಿದರು.

ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ, ಐದು ವರ್ಷಗಳಿಗೊಮ್ಮೆ ಉರೂಸ್ ನಡೆಸಿ ಆರು ತಿಂಗಳಲ್ಲಿ ಚುನಾವಣೆ ನಡೆಸಿ ಅಧಿಕಾರ ಹಸ್ತಾಂತರ ಮಾಡುವ ಸಂಪ್ರದಾಯ ಕೇಂದ್ರ ಜುಮಾ ಮಸೀದಿಯಲ್ಲಿ ಇತ್ತು. 2016ರಲ್ಲಿ ಅಧಿಕಾರ ಪಡೆದ ರಶೀದ್ ಹಾಜಿ ಅವರ ಸಮಿತಿ ನಮಗೆ ಅಧಿಕಾರ ಹಸ್ತಾಂತರ ಮಾಡದೇ ಕಚೇರಿ ಕೀ ನೀಡದೇ ಅನ್ಯಾಯ ಮಾಡಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನಹರಿಸಿದ ಬಳಿಕ ಅಧಿಕಾರ ಹಿಡಿದು ಏಳು ತಿಂಗಳ ಬಳಿಕ ಅಧಿಕಾರಿ ಗಳು ಕಚೇರಿ ತೆರೆದು ಪಂಚನಾಮೆ ನಡೆಸಿ ನಗದು ಹಾಗೂ ದಾಖಲೆ ಪುಸ್ತಕ ಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಮಾತನಾಡಿ, ಅಧಿಕಾರಿಗಳು ಪಂಚನಾಮೆ ನಡೆಸಿ 2016ವರೆಗಿನ ನಿರ್ಣಯ ಪುಸ್ತಕ ಗಳನ್ನು ನೀಡಿದ್ದಾರೆ. ಇದರ ನಂತರ ಏಳು ವರ್ಷಗಳ ಆಗಿರುವ ಕಾರ್ಯಕ್ರಮ ಗಳ ನಿರ್ಣಯ ಪುಸ್ತಕ ಇಲ್ಲ. ಈ ಬಗ್ಗೆ ಕ್ರಮ ಕೈಗೊಂಡು ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು.

ತಹಶೀಲ್ದಾರ್ ಪುಟ್ಟ ರಾಜು ಬಾಗಿಲಿನ ಕೀ ತೆರೆದು ಪಂಚನಾಮೆ ನೆಡೆಸಲು ಅವಕಾಶ ನೀಡಿದರು. ವಕ್ಫ್ ಅಧಿಕಾರಿಗಳು ಪಂಚನಾಮೆ ನಡೆಸಿ ವರದಿ ಒಪ್ಪಿಸಿದರು. ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ, ಉಪಾಧ್ಯಕ್ಷ ಅಶ್ರಫ್ ರೈಟ್ವೇ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ಮುಕ್ಕಚೇರಿ, ಜತೆ ಕಾರ್ಯದರ್ಶಿ ಗಳಾದ, ಇಸಾಕ್ ಮೇಲಂಗಡಿ, ಮುಸ್ತಫ ಮದನಿನಗರ, ಅಡಿಟರ್ ಫಾರೂಕ್, ವಕ್ಫ್ ಅಧಿಕಾರಿ ಅಬೂಬಕ್ಕರ್, ಕಂದಾಯ ನಿರೀಕ್ಷಕರು ಮಂಜುನಾಥ ಎರಡನೇ ದರ್ಜೆಯ ಸಿಬ್ಬಂದಿ,ಕೆ.ಎಚ್, ರಫೀಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪರಿಶೀಲನೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ವಾಗಿ ಉಳ್ಳಾಲ ಎಸಿಪಿ ಧನ್ಯ ಹಾಗೂ ಇನ್ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News