ವಿಧಾನ ಪರಿಷತ್ ಉಪ ಚುನಾವಣೆ: ಬೈಂದೂರಿನ ರಾಜು ಪೂಜಾರಿ ಕಾಂಗ್ರೆಸ್ ಅಭ್ಯರ್ಥಿ

Update: 2024-10-02 15:55 GMT

ರಾಜು ಪೂಜಾರಿ

ಉಡುಪಿ, ಅ.2: ಉಡುಪಿ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷ ಹಾಗೂ ಸಹಕಾರಿ ಧುರೀಣ ಬೈಂದೂರಿನ ಎಸ್.ರಾಜು ಪೂಜಾರಿ ಅವರು ರಾಜ್ಯ ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಪ್ರಾದಿಕಾರ ಕ್ಷೇತ್ರಕ್ಕೆ ಅ.21ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

58 ವರ್ಷ ಪ್ರಾಯದ ಬಿ.ಕಾಂ ಪದವೀಧರ ರಾಜು ಪೂಜಾರಿ ಅವರು 1987ರಲ್ಲಿ ಎನ್‌ಎಸ್‌ಯುಐನ ಪದಾಧಿಕಾರಿ ಯಾಗುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿದ್ದು, ಕಾಂಗ್ರೆಸ್‌ನ ವಿವಿಧ ಸಂಘಟನೆಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಬಳಿಕ ಸದ್ಯ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ.

ಬೈಂದೂರು ತಾಲೂಕು ಮರವಂತೆಯ ಎಸ್.ರಾಜು ಪೂಜಾರಿ ಅವರು ವಿಧಾನ ಪರಿಷತ್ ಉಪಚುನಾವಣೆಗೆ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನಾಳೆ ಅ.3ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪಕ್ಷದ ಮುಖಂಡರುಗಳು ಒಟ್ಟಾಗಿ ಸೇರಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.

ಸಂಸದರಾಗಿ ಆಯ್ಕೆಯಾದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ತೆರವುಗೊಳಿಸಿದ ಸ್ಥಾನಕ್ಕೆ ನಡೆಯುವ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಮತ್ತೊಬ್ಬ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ, ಕಾರ್ಕಳದ ಡಿ.ಆರ್.ರಾಜು, ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಸುನಿಲ್‌ ಕುಮಾರ್‌ಗೆ ಕೂದಲೆಳೆಯಂತರದಿಂದ ಸೋತ ಮುನಿಯಾಲು ಉದಯಕುಮಾರ ಶೆಟ್ಟಿ, ಉಡುಪಿಯ ಹರಿಪ್ರಸಾದ್ ರೈ ಹಾಗೂ ಬಂಟ್ವಾಳದ ಚಂದ್ರಪ್ರಕಾಶ್ ಶೆಟ್ಟಿ ಅವರ ನಡುವೆ ಸ್ಪರ್ಧೆ ಇತ್ತು. ಪಕ್ಷದ ಹಿರಿಯ ನಾಯಕರು ಬಿಲ್ಲವ ಸಮುದಾಯದ ರಾಜು ಪೂಜಾರಿ ಅವರನ್ನು ಅಂತಿಮವಾಗಿ ಹುರಿಯಾಳಾಗಿ ಆಯ್ಕೆ ಮಾಡಿದ್ದಾರೆ.

ರಾಜು ಪೂಜಾರಿ ಪರಿಚಯ: 1966ರಲ್ಲಿ ಜನಿಸಿದ ರಾಜು ಪೂಜಾರಿ ಬಿ.ಕಾಂ ಪದವೀಧರರು. ಕೃಷಿಕರೂ, ವ್ಯಾಪಾರಿಗಳೂ ಆಗಿರುವ ಇವರು 1987ರಲ್ಲಿ ಎನ್‌ಎಸ್‌ಯುಐ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿದರು. 1990ರಲ್ಲಿ ಬೈಂದೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ, 1995-96ರಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಪ್ರಭಾರ ಅಧ್ಯಕ್ಷರಾಗಿದ್ದ ಇವರು 1998ರಿಂದ ಜಿಲ್ಲಾ ಕಾಂಗ್ರೆಸ್ ಸದಸ್ಯ, ಕಾರ್ಯದರ್ಶಿಯಾಗಿದ್ದು, ಪ್ರಸ್ತುತ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ.

ಮರವಂತೆ ಗ್ರಾಮ ಪಂಚಾಯತ್ ಸದಸ್ಯರಾಗುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾದ ರಾಜು ಪೂಜಾರಿ, ಬಳಿಕ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾಗಿಯೂ ಒಂದು ಅವಧಿಗೆ ಅನುಭವ ಪಡೆದರು. ಬಳಿಕ ಎರಡು ಅವಧಿಗೆ ಉಡುಪಿ ಜಿಲ್ಲಾ ಪಂಚಾಯತ್‌ನ ಸದಸ್ಯರಾಗಿ ಆಯ್ಕೆಯಾದ ಇವರು ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಇದರೊಂದಿಗೆ ಜಿಲ್ಲಾ ಪಂಚಾಯತ್‌ನಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸಮಿತಿಗಳಲ್ಲೂ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ರಾಜಕಾರಣದೊಂದಿಗೆ ಸಹಕಾರಿ ಕ್ಷೇತ್ರದಲ್ಲೂ ಅವರು ತಮ್ಮ ಛಾಪು ಮೂಡಿಸಿ ದ್ದರು. ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ, ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ನಿ.ಬೈಂದೂರು ಇವುಗಳ ಅಧ್ಯಕ್ಷರಾಗಿ ಕುಂದಾಪುರ ತಾಲೂಕು ಸಹಕಾರಿ ಯೂನಿಯನ್, ಕುಂದಾಪುರ ತಾಲೂಕು ಆರೋಗ್ಯ ಸಹಕಾರಿ ಸಂಘ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಗೂ ದ.ಕ.ಕೃಷಿ ಅಭಿವೃದ್ಧಿ ಸಹಕಾರಿ ಸಂಘ ಮಂಗಳೂರು ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಕಳೆದ ಕೆಲವು ವರ್ಷಗಳಿಂದ ಅವರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲೂ ಹಲವು ಸಂಘಟನೆಗಳಲ್ಲಿ ಸೇವೆ ಸಲ್ಲಿಸುತಿದ್ದಾರೆ. ಅವರು ಬೈಂದೂರಿನ ಶ್ರೀಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಯ ಅಧ್ಯಕ್ಷರಾಗಿದ್ದಾರೆ.

ದೂರವಾಣಿ ಸಲಹಾ ಸಮಿತಿ, ಖಾದಿ ಬೋರ್ಡು ಬೆಂಗಳೂರು, ಜಿಲ್ಲಾ ಕೆಡಿಪಿ, ಎಪಿಎಂಸಿ ಕುಂದಾಪುರ ಇವುಗಳ ಸದಸ್ಯರಾಗಿದ್ದು, ರಾಜ್ಯಮಟ್ಟದ ಉತ್ತಮ ಸಹಕಾರಿ ಪ್ರಶಸ್ತಿಯನ್ನು ಪಡೆದಿದ್ದಾರೆ. ರಾಜು ಪೂಜಾರಿ ಇವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News