ದಾವಣಗೆರೆ| ಕಳ್ಳರಿಂದ ವಶಪಡಿಸಿಕೊಂಡ 5.18 ಕೋಟಿ ರೂ. ವೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂತಿರುಗಿಸಿದ ಪೊಲೀಸ್ ಇಲಾಖೆ
ದಾವಣಗೆರೆ: ಕಳ್ಳರಿಂದ ವಶಪಡಿಸಿಕೊಂಡ 5,18,93,743 ರೂ. ವೌಲ್ಯದ ಚಿನ್ನ, ಬೆಳ್ಳಿ ಆಭರಣ ಸೇರಿದಂತೆ ನಾನಾ ಸ್ವತ್ತುಗಳನ್ನು ನಗರದ ಪಿಜೆ ಬಡಾವಣೆಯ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಪೊಲೀಸ್ ಇಲಾಖೆಯಿಂದ ವಾರಸುದಾರರಿಗೆ ಹಿಂತಿರುಗಿಸಲಾಯಿತು.
ಕಳೆದ ಒಂದು ವರ್ಷದಲ್ಲಿ (2023) ದಾವಣಗೆರೆ ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳಲ್ಲಿ ಒಟ್ಟು 1,032 ಸ್ವತ್ತು ಕಳವು ಪ್ರಕರಣ ದಾಖಲಾಗಿದ್ದವು. ಇವುಗಳಲ್ಲಿ ಒಟ್ಟು 319 ಪ್ರಕರಣಗಳ ಪತ್ತೆ ಮಾಡಿ, 5.18 ಕೋಟಿ ರೂ. ವೌಲ್ಯದ ವಜ್ರ, ಚಿನ್ನ, ಬೆಳ್ಳಿಯ ಆಭರಣ, ಮೊಬೈಲ್ ಫೋನ್, ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ವಶಪಡಿಸಿಕೊಂಡು, ವಾರಸುದಾರರಿಗೆ ಹಿಂದಿರುಗಿಸಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, "ಕಳೆದ ಒಂದು ವರ್ಷದಲ್ಲಿ ದಾಖಲಾಗಿದ್ದ 1,032 ಪ್ರಕರಣಗಳ ಪೈಕಿ 319 ಪ್ರಕರಣ ಪತ್ತೆ ಮಾಡಿ, 2,24,65,000 ರೂ. ವೌಲ್ಯದ 4 ಕೆಜಿ 493 ಗ್ರಾಂ ಚಿನ್ನಾಭರಣ, 35,56,910 ಲಕ್ಷ ರೂ. ವೌಲ್ಯದ 50 ಕೆಜಿ 813 ಗ್ರಾಂ ಬೆಳ್ಳಿ ಆಭರಣ, 84,75,280 ರೂ. ವೌಲ್ಯದ 175 ದ್ವಿಚಕ್ರ ವಾಹನ, 65,35,000 ರೂ. ವೌಲ್ಯದ 21 ನಾಲ್ಕು ಚಕ್ರ ವಾಹನ ಹಾಗೂ 1,08,61,553 ರೂ. ವೌಲ್ಯದ ಮೊಬೈಲ್, ನಗದು ವಶಪಡಿಸಿಕೊಂಡು, ನ್ಯಾಯಾಲಯದ ಆದೇಶದ ಮೇರೆಗೆ ಸ್ವತ್ತು ಕಳೆದುಕೊಂಡ ವಾರಸುದಾರರಿಗೆ ಹಿಂದಿರುಗಿಸಲಾಗುತ್ತಿದೆ'' ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಎಸ್ಪಿಗಳಾದ ವಿಜಯಕುಮಾರ ಎಂ. ಸತೋಷ್, ಮಂಜುನಾಥ್, ಡಿವೈಎಸ್ಪಿಗಳಾದ ಮಲ್ಲೇಶ್ ದೊಡ್ಡಮನಿ, ಬಸವರಾಜ್, ಸಿಪಿಐಗಳಾದ ಪುಷ್ಪವತಿ ಶೆತಸನದಿ, ಗುರುರಾಜ್, ಶಶಿಧರ್ ಇತರರು ಇದ್ದರು.