ಹರಿಹರ: ನೆರೆ ನೀರಿನಿಂದ ಜಲಾವೃತವಾದ ಸ್ಮಶಾನ; ಗುಡ್ಡದ ಮೇಲೆ ಅಂತ್ಯಕ್ರಿಯೆ ನಡೆಸಿದ ಗ್ರಾಮಸ್ಥರು
ದಾವಣಗೆರೆ: ಸ್ಮಶಾನ ಜಲಾವೃತವಾಗಿರುವುರಿಂದ ಮೃತ ವ್ಯಕ್ತಿಯ ಅಂತ್ಯಕ್ರಿಯೆಗೆ ಪರದಾಡಬೇಕಾದ ಪರಿಸ್ಥಿತಿಯುಂಟಾಗಿದ್ದು, ನದಿ ಉಕ್ಕಿ ಹರಿಯುತ್ತಿರುವ ನಡುವೆಯೇ ಜನರು ನದಿ ದಾಟಿ ಅಂತ್ಯಕ್ರಿಯೆ ನಡೆಸಿರುವ ಘಟನೆ ಹರಿಹರ ತಾಲೂಕಿನ ಗುತ್ತೂರು ಗ್ರಾಮದಲ್ಲಿ ನಡೆದಿರುವ ಬಗ್ಗೆ ಶನಿವಾರ ವರದಿಯಾಗಿದೆ.
ಗ್ರಾಮದ ಮಂಜಪ್ಪ ನಿಧನರಾಗಿದ್ದರು. ದುರಾದೃಷ್ಟಾವಶಾತ್ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಬೇಕಾದ ಸ್ಮಶಾನ ನೆರೆ ನೀರಿನಿಂದ ಜಲಾವೃತವಾಗಿದ್ದ ಕಾರಣ ನದಿ ದಾಟಿ ಗುಡ್ಡದ ಮೇಲೆ ಅಂತ್ಯ ಕ್ರಿಯೆ ನಡೆಸಬೇಕಾಯಿತು.
ಮಲೆನಾಡ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಯೂ ತುಂಬಿ ಹರಿಯುತ್ತಿದೆ, ಇದೇ ನದಿಯಿಂದ ಬಂದ ಹಿನ್ನೀರಿನಿಂದ ಸ್ಮಶಾನ ಜಲಾವೃತವಾಗಿದೆ.
ಸರ್ಕಾರವು ಈ ಬಗ್ಗೆ ಗಮನ ಹರಿಸಿ ಸ್ಮಶಾನ ಭೂಮಿಯನ್ನು ಕೂಡಲೇ ಒದಗಿಸಬೇಕೆಂದು ಗ್ರಾಮದ ದಲಿತ ಮುಖಂಡರು ಆಗ್ರಹಿಸಿದ್ದಾರೆ. ಈ ಹಿಂದೆ ಸ್ಮಶಾನದ ವಿಷಯವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ,ಎಷ್ಟೋ ಬಾರಿ ಮನವಿ ಮಾಡಿದರು ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಶೀಘ್ರವೇ ಕ್ರಮ ತೆಗೆದುಕೊಳ್ಳುವಂತೆ ಗ್ರಾಮದ ಹಿರಿಯರು ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.