ಹುಲ್ಲು ಸುಡುವ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನಿರಾಕರಿಸಿ: ಸುಪ್ರೀಂಕೋರ್ಟ್

Update: 2023-11-22 02:21 GMT

ಹೊಸದಿಲ್ಲಿ: ರೈತರು ಹೊಲಗಳಲ್ಲಿ ಹುಲ್ಲು ಸುಡುವುದು ರಾಷ್ಟ್ರ ರಾಜಧಾನಿ ಪ್ರದೇಶದ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದು, ಹುಲ್ಲು ಸುಡುವುದನ್ನು ನಿಲ್ಲಿಸಲು ನಿರಾಕರಿಸುವ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಪ್ರಯೋಜನವನ್ನು ನಿರಾಕರಿಸಬೇಕು ಎಂದು ಸುಪ್ರೀಂಕೋರ್ಟ್ ಮಂಗಳವಾರ ಸಲಹೆ ಮಾಡಿದೆ.

"ಜನರಿಗೆ ಅದರಲ್ಲೂ ಮುಖ್ಯವಾಗಿ ಮಕ್ಕಳ ಜೀವದ ಮೇಲೆ ದುಷ್ಪರಿಣಾಮ ಬೀರುವ ಕ್ರಮ ಸ್ಥಗಿತಗೊಳಿಸುವಂತೆ ನೀಡಿರುವ ಆದೇಶವನ್ನು ಉಲ್ಲಂಘಿಸುವ ಮತ್ತು ಬೆಂಕಿ ಹಾಕುವ ರೈತರ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯಡಿ ಏಕೆ ಖರೀದಿಸಬೇಕು?" ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಮಾಲಿನ್ಯ ತಡೆಗೆ ನ್ಯಾಯಾಲಯ ಇಷ್ಟೊಂದು ಸಲಹೆಗಳನ್ನು ನೀಡಿದರೂ, ನಿಯಮ ಉಲ್ಲಂಘಿಸುವುದನ್ನು ಮುಂದುವರಿಸಿರುವವರಿಗೆ ಹಣಕಾಸು ನೆರವು ಏಕೆ ನೀಡಬೇಕು? ಹೊಲಗಳಲ್ಲಿ ಬೆಂಕಿ ಹಾಕಿ ಹುಲ್ಲು ಸುಡುವ ರೈತರನ್ನು ಗುರುತಿಸಿ ಅವರ ಉತ್ಪನ್ನಗಳನ್ನು ಈ ವ್ಯವಸ್ಥೆಯಡಿ ಮಾರಾಟ ಮಾಡಲು ಅವಕಾಶ ನೀಡಬಾರದು. ಅವರಿಗೂ ಅದರ ಬಿಸಿ ತಟ್ಟುವಂತಾಗಬೇಕು" ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧೂಲಿಯಾ ಅವರನ್ನೊಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯ ನಿಬಂಧನೆಗಳು ಅಥವಾ ರದ್ದುಪಡಿಸುವಿಕೆಯು ತೀರಾ ಗೊಂದಲಕಾರಿ ಆರ್ಥಿಕ ಹಾಗೂ ನೀತಿ ಸಂಬಂಧಿತ ಅಂಶಗಳನ್ನು ಹೊಂದಿದ್ದು, ಕೃಷಿ ವೆಚ್ಚಗಳು ಮತ್ತು ಬೆಲೆ ಆಯೋಗ ಇದನ್ನು ಆಳವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಯಾವುದೇ ವ್ಯತ್ಯಯಗಳಿದ್ದಲ್ಲಿ ಅಥವಾ ಆಂಶಿಕವಾಗಿ ಇದನ್ನು ಅನುಷ್ಠಾನಗೊಳಿಸಲು ತಜ್ಞರಿಂದ ವಿವರವಾದ ಅಧ್ಯಯನದ ಅಗತ್ಯವಿದೆ. ಏಕೆಂದರೆ ಇದು ಆಹಾರ ಭದ್ರತೆ ಮತ್ತು ಆರ್ಥಿಕ ಸುಭದ್ರತೆಯ ಇತರ ಸಂಬಂಧಿತ ಅಂಶಗಳ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಇದರ ಮೊರೆ ಹೋಗಬಾರದು ಎಂದು ಗೌರವಯುತವಾಗಿ ಸಲಹೆ ಮಾಡಲಾಗುತ್ತಿದೆ" ಎಂದು ಹೇಳಿದೆ.



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News