ಕಳಪೆ ಪ್ರದರ್ಶನಕ್ಕೆ ಬೆಲೆ ತೆತ್ತ ಇಂಗ್ಲೆಂಡ್

ಎಂ ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯದಲ್ಲಿ ಇಂಗ್ಲಂಡ್ ವಿರುದ್ಧ ಶ್ರೀಲಂಕಾ 8 ವಿಕೆಟ್ ಗಳಿಂದ ಭಾರೀ ಜಯ ಗಳಿಸಿದೆ.

Update: 2023-10-26 14:00 GMT

PHOTO : X/@OfficialSLC

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯದಲ್ಲಿ ಇಂಗ್ಲಂಡ್ ವಿರುದ್ಧ ಶ್ರೀಲಂಕಾ 8 ವಿಕೆಟ್ ಗಳಿಂದ ಭಾರೀ ಜಯ ಗಳಿಸಿದೆ.

ವಿಶ್ವಕಪ್ ಟೂರ್ನಿಯುದ್ದಕ್ಕೂ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಇಂಗ್ಲೆಂಡ್ ಈ ಪಂದ್ಯದಲ್ಲಿಯೂ ತನ್ನ ಹೀನಾಯ ಬ್ಯಾಟಿಂಗ್ ಮುಂದುವರಿಸಿತು. ಪರಿಣಾಮ ಶ್ರೀಲಂಕಾ ಗೆ 157 ರನ್ ಗುರಿ ನೀಡಲಷ್ಟೇ ಇಂಗ್ಲೆಂಡ್ ಶಕ್ತವಾಯಿತು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ತಂಡ 25.4 ಓವರ್ ಗಳಲ್ಲಿಯೇ ಗುರಿ ತಲುಪುವ ಮೂಲಕ ಅಂಕ ಪಟ್ಟಿ ಯಲ್ಲಿ ಎರಡು ಸ್ಥಾನ ಮೇಲಕ್ಕೇರಿದರೆ ಇಂಗ್ಲೆಂಡ್ ಟೂರ್ನಿಯಲ್ಲಿ ನಾಲ್ಕು ಸೋಲುಗಳ ಮೂಲಕ ಸೆಮೀಸ್ ಹಾದಿ ಕಠಿಣ ವಾಗಿಸಿತು.

ಆಂಗ್ಲರು ನೀಡಿದ ಅಲ್ಪ ಗುರಿ ನಿರಾಯಾಸವಾಗಿ ಬೆನ್ನಟ್ಟುವ ನಿರೀಕ್ಷೆಯಲ್ಲಿ ಬ್ಯಾಟಿಂಗ್ ಗೆ ಬಂದ ಶ್ರೀಲಂಕಾ 5.2 ಓವರ್ ಗಳಲ್ಲಿಯೇ ತನ್ನ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಲಂಕಾ ಪರ ಕುಸಾಲ್ ಪರೇರಾ 4 ರನ್ ಗಳಿಸಿದರೆ ನಾಯಕ ಕುಸಾಲ್ ಮೆಂಡಿಸ್ 11 ಬಾರಿಸಿ ಕ್ರಮವಾಗಿ ಇಬ್ಬರೂ ಡೇವಿಡ್ ವಿಲ್ಲಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ಪಾತುಮ್ ನಿಸಾಂಕ ಹಾಗೂ ಸದೀರ ಸಮರವಿಕ್ರಮ ಜೋಡಿ ಪರಸ್ಪರ ಅರ್ಧಶತಕದ ಭರ್ಜರಿ ಆಟ ಪ್ರದರ್ಶಿಸಿದರು. ಪಾತುಮ್ ನಿಸಾಂಕ 7 ಬೌಂಡರಿ 2 ಸಿಕ್ಸರ್ ಸಹಿತ 77 ರನ್ ಗಳಿಸಿದರೆ ಸದೀರ ಸಮರವಿಕ್ರಮ 7 ಬೌಂಡರಿ 1 ಸಿಕ್ಸರ್ ಸಹಿತ 65ರನ್ ಬಾರಿಸಿ ಗೆಲುವಿಗೆ ಕಾರಣರಾದರು.

ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ 2 ವಿಕೆಟ್ ಪಡೆಯುವ ಮೂಲಕ 10 ವಿಕೆಟ್ ಜಯವನ್ನು ತಪ್ಪಿಸಿದರು.

ಈ ಮೊದಲು ಶ್ರೀಲಂಕಾ ವಿರುದ್ದ ಟಾಸ್ ಗೆದ್ದ ಇಂಗ್ಲೆಂಡ್ ತಂಡ ನಿರೀಕ್ಷೆಯಂತೆ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ನಾಯಕನ ಯೋಜನೆ ಹುಸಿ ಗೊಳಿಸುವಂತೆ ಬ್ಯಾಟ್ ಬೀಸಿದ ಇಂಗ್ಲೆಂಡ್ ಬ್ಯಾಟರ್ಸ್, ಲಂಕಾ ಸಂಘಟಿತ ಬೌಲಿಂಗ್ ಗೆ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಏಕಾಂಗಿ ಹೊರಾಟ ನಡೆಸಿದ ಬೆನ್ ಸ್ಟೋಕ್ಸ್ 6 ಬೌಂಡರಿ ಸಹಿತ 43 ರನ್ ಬಾರಿಸಿ ತಂಡದ ಪರ ಗರಿಷ್ಟ ರನ್ ಸ್ಕೋರರ್ ಎನಿಸಿಕೊಂಡರು. ಇಂಗ್ಲೆಂಡ್ ಆರಂಭಿಕ ಆಟಗಾರರಾದ ಜಾನ್ನಿ ಬೈರ್ ಸ್ಟೋವ್ 30 ಗಳಿಸಿದರೆ ಡೇವಿಡ್ ಮಲನ್ 28 ರನ್ ಗಳಿಸಿ ಕ್ರಮವಾಗಿ ಕಸುನ್ ರಜಿತಾ ಹಾಗೂ ಏಂಜಲೊ ಮಾಥ್ಯೂಸ್ ವಿಕೆಟ್ ಒಪ್ಪಿಸಿದರು. ಜೊ ರೂಟ್(3) ಜೋಸ್ ಬಟ್ಲರ್(8) ಲಿಯಾಮ್ ಲಿವಿಂಗ್ ಸ್ಟೋನ್ (1) ಮೊಯೀನ್ ಅಲಿ (15) ಕ್ರಿಸ್ ವೂಕ್ಸ್ (0) ಡೇವಿಡ್ ವಿಲ್ಲಿ (10) ಅದಿಲ್ ರಶೀದ್ (2) ಮಾರ್ಕ್ ವುಡ್ (5) ರನ್ ಬಾರಿಸಿದರು.

ಲಂಕಾ ಪರ ಆಘಾತಕಾರಿ ಬೌಲಿಂಗ್ ನಡೆಸಿದ ಲಹಿರು ಕುಮಾರ 3 ವಿಕೆಟ್ ಪಡೆದು ಸಂಭ್ರಮಿಸಿದರೆ ಅನುಭವಿ ಆಟಗಾರ ಏಂಜಲೊ ಮಾಥ್ಯೂಸ್ ಹಾಗೂ ಕಸುನ್ ರಜಿತಾ ತಲಾ 2 ,ಹಾಗೂ ಮಹೀಶ್ ತೀಕ್ಷಣ ಒಂದು ವಿಕೆಟ್ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News