ಫೆಬ್ರವರಿ 15 ರೊಳಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಮೊದಲ ಕರಡು ಸಿದ್ಧ: ಶಶಿ ತರೂರ್

Update: 2024-01-28 03:10 GMT

Photo: facebook.com/ShashiTharoor

ಕೋಲ್ಕತಾ : “ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆಯ ಮೊದಲ ಕರಡು ಫೆಬ್ರವರಿ 15 ರೊಳಗೆ ಬಿಡುಗಡೆಯಾಗಲಿದೆ. ಚುನಾವಣಾ ದಿನಾಂಕಗಳನ್ನು ಘೋಷಿಸುವ ಮೊದಲು ಅಂತಿಮ ಪ್ರಣಾಳಿಕೆ ಹೊರಬರಲಿದೆ” ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಶನಿವಾರ ಹೇಳಿದ್ದಾರೆ ಎಂದು ndtv ವರದಿ ಮಾಡಿದೆ.

ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್ ಜಂಟಿಯಾಗಿ ಪಕ್ಷದ ಪ್ರಣಾಳಿಕೆಯನ್ನು ಸಿದ್ಧಪಡಿಸುವ ಕುರಿತು ಸಾವರ್ಜನಿಕ ವಿಭಾಗಗಳಿಂದ ಅಭಿಪ್ರಾಯ ಸಂಗ್ರಹಿಸಲು ಆಯೋಜಿಸಿದ್ದ 'ಶೇಪ್ ದಿ ಫ್ಯೂಚರ್' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

"ನಮಗೆ ನಮ್ಮ ಆಂತರಿಕ ಕಾರ್ಯವಿಧಾನಗಳಿವೆ. ಮೊದಲ ಕರಡು ಫೆಬ್ರವರಿ 15 ರೊಳಗೆ ಸಿದ್ಧವಾಗಬೇಕು. ನಂತರ ಅದನ್ನು ನಮ್ಮ ಕಾರ್ಯಕಾರಿ ಸಮಿತಿಯು ಒಪ್ಪಿಗೆ ಪಡೆದು ಅಂಗೀಕರಿಸಬೇಕು. ಚುನಾವಣಾ ಆಯೋಗವು ಚುನಾವಣೆಗಳನ್ನು ಘೋಷಿಸುವ ಹೊತ್ತಿಗೆ ನಮ್ಮ ಪ್ರಣಾಳಿಕೆ ಸಿದ್ಧವಾಗಿ ಹೊರಬರಲಿದೆ” ಎಂದು ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಸದಸ್ಯರಾಗಿರುವ ತಿರುವನಂತರಪುರಂ ಸಂಸದ ಶಶಿತರೂರ್ ಹೇಳಿದರು.

"ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾದ ಭಾಗವಾಗಿರುವ ಪಕ್ಷಗಳು ತಮ್ಮದೇ ಆದ ಅಂಶಗಳನ್ನೊಳಗೊಂಡ ಪ್ರಣಾಳಿಕೆ ಸಿದ್ಧಪಡಿಸಬಹುದು. ಅವುಗಳಲ್ಲಿರುವ ಪ್ರಮುಖ ಅಂಶಗಳನ್ನು ಪಡೆದು ಪ್ರಣಾಳಿಕೆಯನ್ನು ಮುಂದಿಡಬಹುದು” ಎಂದು ಅವರು ಭರವಸೆ ವ್ಯಕ್ತಪಡಿಸಿದರು.

“ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ನಿರುದ್ಯೋಗ, ಬೆಲೆ ಏರಿಕೆ, ಬಡವರಿಗೆ ಆರ್ಥಿಕ ಸಹಾಯದ ಅಗತ್ಯ, ಮಹಿಳೆಯರ ಹಕ್ಕುಗಳು, ಯುವಕರು ಮತ್ತು ರೈತರ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತವೆ” ಎಂದು ಶಶಿ ತರೂರ್ ಹೇಳಿದರು.

ಶಶಿ ತರೂರ್ ಅವರು ಕೈಗಾರಿಕೆ, ಆರ್ಥಿಕತೆ, ಆರೋಗ್ಯ, ಬ್ಯಾಂಕಿಂಗ್, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಮಾನವ ಸಂಪನ್ಮೂಲ, ಸಾಹಿತ್ಯ, ಸಾಂಸ್ಕೃತಿಕ, ಕಾನೂನು ತಜ್ಞರ ಅಭಿಪ್ರಾಯಗಳನ್ನು ಕಾರ್ಯಕ್ರಮದಲ್ಲಿ ಆಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News