ಕಾಂಗ್ರೆಸ್ ತೆಕ್ಕೆಗೆ ಗದಗ-ಬೆಟಗೇರಿ ನಗರಸಭೆ; ಬಿಜೆಪಿಗೆ ಸೋಲು

ಗದಗ : ತೀವ್ರ ಕುತೂಹಲ ಕೆರಳಿಸಿದ್ದ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಾಕಷ್ಟು ಹೈಡ್ರಾಮಾ ತಿರುವುಗಳ ನಡುವೆ ಪೂರ್ಣಗೊಂಡಿದೆ. ನಗರಸಭೆ ಎರಡನೇ ಅವಧಿಗೆ ಅಧ್ಯಕ್ಷರಾಗಿ 16ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯರಾದ ಕೃಷ್ಣಾ ಪರಾಪೂರ, ಹಾಗೂ ಉಪಾಧ್ಯಕ್ಷರಾಗಿ 4ನೇ ವಾರ್ಡ್‌ನ ಸದಸ್ಯರಾದ ಶಕುಂತಲಾ ಅಕ್ಕಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷ ನಗರಸಭೆ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಇನ್ನು ಈ ವೇಳೆ ಭಾರಿ ಹೈಡ್ರಾಮಾವೇ ನಡೆದುಹೋಗಿದ್ದು, ನಗರಸಭೆ ಇಂದು ಗದ್ದಲ ಗಲಾಟೆಗಳ ಕೇಂದ್ರಬಿಂದುವಾಗಿ ಬದಲಾಗಿತ್ತು. ಬಿಜೆಪಿಯವರ ಪ್ರಕಾರ ಕೋರ್ಟ್‌ನಿಂದ ಚುನಾವಣೆ ಮುಂದೂಡಿಕೆಯಾಗಿದ್ದರೂ, ಕಾನೂನುಬಾಹಿರವಾಗಿ ಚುನಾವಣೆ ನಡೆಸಲಾಗಿದೆ ಎಂದು ಸಾಕಷ್ಟು ಗದ್ದಲ ಗಲಾಟೆ ನಡೆಸಿದ ಘಟನೆಯೂ ನಡೆಯಿತು. ಇದೇ ವೇಳೆ ಅನರ್ಹಗೊಂಡ ಬಿಜೆಪಿಯ ಮೂವರು ಸದಸ್ಯರನ್ನು ನಗರಸಭೆ ಒಳಗಡೆ ಬಿಡದ ಕಾರಣ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಈ ವೇಳೆ ಕೆಲಕಾಲ ಗೊಂದಲದ ವಾತಾವರಣವೂ ಏರ್ಪಟ್ಟಿತ್ತು.
ಇನ್ನೇನು ಚುನಾವಣೆ ಪ್ರಕ್ರಿಯೆ ಆರಂಭವಾಯಿತು ಎನ್ನುವಾಗಲೇ ಚುನಾವಣೆ ಮುಂದೂಡಲಾಗಿದೆ ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪರವಾಗಿ ಜೈಕಾರ ಕೂಗಿ, ಸಂಭ್ರಮಕ್ಕೆ ಮುಂದಾದರು. ಚುನಾವಣೆ ಅರ್ಧಕ್ಕೆ ನಿಲ್ಲಿಸಿ ಎಲ್ಲರೂ ಹೊರಗಡೆ ಬರುತ್ತಾರೆ ಎಂದು ನಗರಸಭೆ ಹೊರಗಡೆ ಕಾಯುತ್ತಿದ್ದ ಬಿಜೆಪಿ ಪಕ್ಷದವರಿಗೆ ಕೊನೆಗೆ ನಿರಾಸೆಯ ಫಲಿತಾಂಶ ಕಾದಿತ್ತು.
ಇದರ ಮಧ್ಯೆ ಸಂಸದ ಬಸವರಾಜ ಬೊಮ್ಮಾಯಿ ಚುನಾವಣೆ ಬಹಿಷ್ಕರಿಸಿ ಹೊರಗಡೆ ಬಂದು ಮಾಧ್ಯಮಗಳೆದುರು, ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ಹೈಕೋರ್ಟ್ ಚುನಾವಣೆ ಮುಂದೂಡಿದೆ ಎಂದು ಆದೇಶಿಸಿದ್ದರೂ, ಕಾನೂನು ಬಾಹಿರವಾಗಿ ಅಧಿಕಾರಿಗಳು ಚುನಾವಣೆ ನಡೆಸಿದ್ದಾರೆ. ಹೀಗಾಗಿ ಇದರ ವಿರುದ್ಧ ನಾವೂ ಸಹ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದ ಆಕ್ರೋಶ ಹೊರಹಾಕಿದರು.
ಇನ್ನು ಬೊಮ್ಮಾಯಿಯವರು ಹೊರಬರುತ್ತಿದ್ದಂತೆ ಬಿಜೆಪಿ ಸದಸ್ಯರೆಲ್ಲರೂ ಚುನಾವಣೆ ಬಹಿಷ್ಕರಿಸಿ ಹೊರಬಂದಿದ್ದರು. ಇದಾದ ಬಳಿಕ ಕಾಂಗ್ರೆಸ್ ತನ್ನ 18ರ ಸಂಖ್ಯಾಬಲದೊಂದಿಗೆ ಕೈ ಎತ್ತುವ ಮೂಲಕ ಬಹುಮತ ಸಾಬೀತುಪಡಿಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ತನ್ನದಾಗಿಸಿಕೊಂಡು ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯಿತು.
"ಕಾನೂನು ಪ್ರಕಾರ ಚುನಾವಣೆ ನಡೆದಿದೆ.ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ. ಸರಿಯಾಗಿ 2 ಗಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಈ ವೇಳೆ ಬಿಜೆಪಿ ಸದಸ್ಯರು ಚುನಾವಣೆ ಬಹಿಷ್ಕರಿಸಿ ಹೊರನಡೆದರು. ಬಾಗಿಲು ಬಂದ್ ಮಾಡಿ ಅಧಿಕಾರಿಗಳು ಚುನಾವಣೆ ನಡೆಸಿದರು. ನಾನೂ ಸಹ ಒಬ್ಬ ಮತದಾರನಾಗಿ ಮತ ಚಲಾಯಿಸಿದ್ದೇನೆ. ಚುನಾವಣೆ ಮುಂದೂಡಿದ ಬಗ್ಗೆ ನನಗೆ ಮಾಹಿತಿ ಇಲ್ಲ"
ಎಚ್.ಕೆ.ಪಾಟೀಲ್, ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರು
"ಚುನಾವಣೆ ಪ್ರಕ್ರಿಯೆ ನಡೆಯುವಾಗ ಬಿಜೆಪಿ ಸದಸ್ಯರ ಆಕ್ಷೇಪಣೆಯಂತೆ ಚುನಾವಣೆ ಮುಂದೂಡಿದೆ ಎನ್ನುವ ಹೈಕೋರ್ಟ್ ಸೂಚನೆ ಏನಾದರೂ ಬಂದಿದೆಯಾ ಎಂದು ಈಮೇಲ್ ಅನ್ನು ಚೆಕ್ ಮಾಡಿಸಿದೆ. ಆದರೆ ಯಾವುದೇ ಸೂಚನೆಯ ಮೇಲ್ ಬರದ ಹಿನ್ನೆಲೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿದ್ದೇನೆ. ಬಾಗಿಲು ಬಂದ್ ಮಾಡಿದ್ದರಿಂದ ಹಾಗೂ ಯಾವುದೇ ಸಂಹವನ ಇಲ್ಲದ ಕಾರಣ ಹೊರಗೆ ಯಾವ ಅಧಿಕಾರಿಗಳೂ ಬಂದ ಮಾಹಿತಿ ನನಗೆ ಬಂದಿಲ್ಲ"
ಗಂಗಪ್ಪ ಎಂ., ಉಪವಿಭಾಗಾಧಿಕಾರಿಗಳು ಗದಗ
"ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ಹೈಕೋರ್ಟ್ ಮುಂದೂಡಿರುವ ಕುರಿತು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಾನು ಚುನಾವಣಾ ಅಧಿಕಾರಿಗಳಿಗೆ ತಿಳಿಸಲು ಬಂದಿದ್ದೆ. ಆದರೆ ಅಷ್ಟೊತ್ತಿಗಾಗಲೇ ಚುನಾವಣೆ ಪ್ರಕ್ರಿಯೇ ಮುಗಿದು ಹೋಗಿತ್ತು"
ಅನ್ನಪೂರ್ಣ ಮುದಕಮ್ಮನವರ, ಅಪರ ಜಿಲ್ಲಾಧಿಕಾರಿಗಳು