ಗದಗ : ಬಡ್ಡಿ ದಂಧೆಕೋರರ ಮನೆ ಮೇಲೆ ಪೊಲೀಸರ ದಾಳಿ

Update: 2025-02-09 18:06 IST
ಗದಗ : ಬಡ್ಡಿ ದಂಧೆಕೋರರ ಮನೆ ಮೇಲೆ ಪೊಲೀಸರ ದಾಳಿ
  • whatsapp icon

ಗದಗ : ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಹಾವಳಿ ಸೇರಿದಂತೆ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದೆ. ಹೀಗಾಗಿ ಗದಗ–ಬೆಟಗೇರಿ ಅವಳಿ ನಗರದಲ್ಲಿ ಮೀಟರ್​​ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಏಕಕಾಲಕ್ಕೆ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ. 

ಈ ವೇಳೆ ಬಡ್ಡಿ ದಂಧೆ ನಡೆಸುತ್ತಿದ್ದ ಹಾಗೂ ಅದಕ್ಕೆ ಸಹಾಯ ಮಾಡುತ್ತಿದ್ದ ಒಟ್ಟು 9 ಜನರ ವಶಕ್ಕೆ ಪಡೆಯಲಾಗಿದೆ. ಬಡ್ಡಿ ದಂಧೆಕೋರರ ಮನೆಗಳಲ್ಲಿ ಲಕ್ಷಾಂತರ ರೂ. ಹಣದ ಕಂತೆ, ಬಾಂಡ್, ಖಾಲಿ ಚೆಕ್‌ಗಳು ಸೇರಿದಂತೆ ಅನೇಕ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಇನ್ನು ಸಂಗಮೇಶ ದೊಡ್ಡಣ್ಣ ಎಂಬವರ ಮನೆಯಲ್ಲಿ 26 ಲಕ್ಷ 57 ಸಾವಿರ ರೂ. ನಗದು, ಖಾಲಿ ಬಾಂಡ್, ಚೆಕ್ ಗಳು ಪತ್ತೆಯಾಗಿದ್ದು, ರವಿ ಕೌಜಗೇರಿ‌ ಮನೆಯಲ್ಲಿ ಚೆಕ್‌ಗಳು, ಬಾಂಡ್, ಪೇಪರ್ಸ್, ಹಣ ಎಣಿಸುವ ಮಷಿನ್ ಕೂಡ ಪತ್ತೆಯಾಗಿವೆ.

ಅವಳಿ ನಗರದ 12 ಕಡೆಗಳಲ್ಲಿ ಏಕಕಾಲಕ್ಕೆ ಈ ದಾಳಿ ನಡೆಸಲಾಗಿದ್ದು, ಬಿಎನ್ಎಸ್ ಹಾಗೂ ಸೆಕ್ಯುರಿಟಿ ಪ್ರೋಸಿಡಿಂಗ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ‌ ಎಂದು ಗದಗ ಎಸ್ಪಿ ನೇಮಗೌಡ ತಿಳಿಸಿದ್ದಾರೆ.

ಕೆಲವು ರೆಜಿಸ್ಟರ್ ಮಾಡಿ ವ್ಯವಹಾರ ನಡೆಸಿದ್ದರೆ, ಇನ್ನೂ ಕೆಲವರು ಅನಧಿಕೃತವಾಗಿ ಈ ದಂಧೆಯಲ್ಲಿದ್ದಾರೆ. ಧಮ್ಕಿ, ಬೆದರಿಕೆ ಹಾಕಿ ಹಣ ವಸೂಲಿ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ಗದಗ ನಗರ, ಬೆಟಗೇರಿ, ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದ್ದು, ಹೆಚ್ಚುವರಿ ಎಸ್ಪಿ ಎಂ.ಬಿ ಸಂಕದ, ಸಿಪಿಐಗಳಾದ ಧೀರಜ್ ಸಿಂಧೆ, ಡಿ.ಬಿ.ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News