ದೇಶದ ಅಭಿವೃದ್ಧಿಗಾಗಿ ಮೋದಿ ಅವರು ಪ್ರಧಾನಿ ಹುದ್ದೆಯನ್ನು ಬೇರೆಯವರಿಗೆ ಬಿಟ್ಟುಕೊಡಲಿ: ಸಚಿವ ಸಂತೋಷ್ ಲಾಡ್

ಗದಗ,ಫೆ.18: ದೇಶದ ಪರಿಸ್ಥಿತಿ ಈ ಪ್ರಧಾನಿ ಹುದ್ದೆಯಲ್ಲಿರೋ ಮೋದಿಯವರಿಂದ ದಿವಾಳಿಯಾಗಿದ್ದು, ನಿತೀನ್ ಗಡ್ಕರಿಯಂತಹ ಸೂಕ್ತರೂ ಪ್ರಧಾನಿ ಹುದ್ದೆಗೆ ಇದ್ದಾರೆ. ದೇಶದ ಹಿತದೃಷ್ಟಿಯಿಂದ ಬೇರೆಯವರಿಗೆ ಪ್ರಧಾನಿ ಹುದ್ದೆಯನ್ನು ಬಿಟ್ಟುಕೊಡುವಂತೆ ಬಿಜೆಪಿ ಕಾರ್ಯಕರ್ತರಾದಿಯಾಗಿ ಮುಖಂಡರು ಧ್ವನಿಯೆತ್ತಬೇಕೆಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಗ್ರಹಿಸಿದ್ದಾರೆ.
ಗದಗ ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಇಲ್ಲಿವರೆಗೆ ಸುಮಾರು 20ಕ್ಕೂ ಹೆಚ್ಚಿನ ಜಿಲ್ಲೆಗಳಿಗೆ ನಾನು ಪ್ರವಾಸ ಮಾಡಿದ್ದು, ಕಾರ್ಮಿಕ ಇಲಾಖೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ಪ್ರಗತಿಪರಿಶೀಲನಾ ಸಭೆ ನಡೆಸಿದ್ದೇನೆ. ಅದರಂತೆ ಗದಗಿಗೂ ಬಂದು ಸಭೆ ನಡೆಸಲಾಗಿದೆ ಎಂದರು.
ರಾಜ್ಯದ ದೇಶದ ಸಮಸ್ಯೆಗಳ ವಿಷಯಗಳಿಗೆ ಹೆಚ್ಚು ಆದ್ಯತೆ ಕೊಡಬೇಕೇ ವಿನಃ ಸಚಿವ ಸಂಪುಟ ಸರ್ಜರಿ ಅದು ಇದು ಎನ್ನುವ ವಿಷಯಕ್ಕೆ ಮಹತ್ವ ನೀಡಬಾರದು. ಜನರ ಸಮಸ್ಯೆಗಳಿಗಿಂತ ಅಭಿವೃದ್ಧಿಗಿಂತ ಸಚಿವ ಸಂಪುಟದ ವಿಷಯವೇನಷ್ಟೂ ಮಹತ್ವದ್ದಲ್ಲ. ಜನರ ಮಹತ್ವದ ವಿಚಾರಗಳಿಗೆ ಗಮನ ನೀಡಬೇಕು ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ರಾಜಣ್ಣ ವಿಚಾರ ಅವರವರಿಗೆ ಬಿಟ್ಟಿದ್ದಾಗಿದೆ. ಯಾರೂ ಹೊಸ ಸಿಎಂ ವಿಚಾರವನ್ನು ತೇಲಿಬಿಟ್ಟಿದ್ದಾರೆಯೋ ಅವರನ್ನೇ ಸುದ್ದಿಗಾರರು ಪ್ರಶ್ನಿಸಬೇಕೇ ಹೊರತು ನನ್ನನ್ನಲ್ಲ. ನನಗೆ ಸಂಬಂಧವಿಲ್ಲದ ಅಥವಾ ತಿಳಿಯದೇ ಇರುವ ವಿಚಾರದ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ನಾನು ಯಾರ ಪರವೂ ಅಲ್ಲ, ವಿರೋದವೂ ಅಲ್ಲ. ನಾನು ಕಾಂಗ್ರೆಸ್ ಪಕ್ಷದ ಪರ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕುಂಭಮೇಳದಲ್ಲಿ ಎಷ್ಟೊಂದು ಜನರ ಸಾವಾಗಿದೆ. ಸಾವಿರಾರು ಜನರಿಗೆ ಅನಾನುಕೂಲವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡು ಭಕ್ತಾದಿಗಳಿಗೆ ನೆರವಾಗುವಂತೆ ಸುದ್ದಿಗಾರರು ಕೇಂದ್ರವನ್ನು ಪ್ರಶ್ನೆ ಮಾಡಬೇಕು ಎಂದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾನೂನು ಸಚಿವ ಹೆಚ್ ಕೆ ಪಾಟೀಲ್, ಶಾಸಕರಾದ ಜಿ.ಎಸ್ ಪಾಟೀಲ್, ಸಂಕನೂರು ಚಂದ್ರು ಲಮಾಣಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ, ಕಾರ್ಮಿಕ ಇಲಾಖೆಯ ಆಯುಕ್ತ ಗೋಪಾಲಕೃಷ್ಣ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.