ಗಾಲ್ಫ್: ಕನ್ನಡತಿ ಅದಿತಿ ಅಶೋಕ್ ಗೆ ಬೆಳ್ಳಿ

Update: 2023-10-01 17:32 GMT

Photo: twitter.com/WSportsZone

ಹಾಂಗ್ಝೌ, ಅ.2: ಭಾರತದ ಗಾಲ್ಫರ್ ಅದಿತಿ ಅಶೋಕ್ ಏಶ್ಯನ್ ಗೇಮ್ಸ್ ನ ಮಹಿಳೆಯರ ಗಾಲ್ಫ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಸ್ಪರ್ಧೆಯ ಕೊನೆಯ ದಿನವಾದ ರವಿವಾರ ಅದಿತಿ ಅಶೋಕ್ ಗೆ ದೊಡ್ಡ ಸವಾಲಾಗಿ ಕಂಡುಬಂದಿದ್ದು ಫೈನಲ್ ನಲ್ಲಿ ಎಡವಿದರು. ಚಿನ್ನದ ಪದಕ ಥಾಯ್ಲೆಂಡ್ ನ ಅರ್ಪಿಚಾಯಾ ಯುಬೋಲ್ ಪಾಲಾಯಿತು.

ಅದಿತಿ 7 ಸ್ಟ್ರೋಕ್ ಮುನ್ನಡೆಯೊಂದಿಗೆ ಫೈನಲ್ ಗೆ ಪ್ರವೇಶಿಸಿದ್ದು ಸುಲಭದ ಗೆಲುವಿನ ವಿಶ್ವಾಸದಲ್ಲಿದ್ದರು. ಆದರೆ ಭಾರತದ ಗಾಲ್ಫರ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ದಕ್ಷಿಣ ಕೊರಿಯಾದ ಹಿಯುಂಜೊ ಯೂ ಕೂಡ ಉತ್ತಮ ಪ್ರದರ್ಶನದೊಂದಿಗೆ ಕಂಚು ಜಯಿಸಿದರು.

ಸ್ಪರ್ಧಾವಳಿಯಲ್ಲಿದ್ದ ಭಾರತದ ಪ್ರಣವಿ ಅರಸ್ ಹಾಗೂ ಅವನಿ ಪ್ರಶಾಂತ್ ಟೀಮ್ ವಿಭಾಗದಲ್ಲಿ ಕ್ರಮವಾಗಿ 75 ಹಾಗೂ 76 ಅಂಕ ಗಳಿಸಿ ಭಾರತ ತಂಡವು ಒಟ್ಟಾರೆ 4ನೇ ಸ್ಥಾನ ಪಡೆಯಲು ನೆರವಾದರು.

ಬೆಂಗಳೂರಿನ 2 ಬಾರಿಯ ಚಾಂಪಿಯನ್ ಅದಿತಿ ಪ್ರಸಕ್ತ ಗೇಮ್ಸ್ ನಲ್ಲಿ ಕೂದಲೆಳೆ ಅಂತರದಿಂದ ಚಿನ್ನದ ಪದಕ ವಂಚಿತರಾದರು. ಟೋಕಿಯೊ ಒಲಿಂಪಿಕ್ಸ್ ನಲ್ಲಿ 4ನೇ ಸ್ಥಾನ ಪಡೆದಿದ್ದ ಅದಿತಿ ಪದಕ ವಂಚಿತರಾಗಿದ್ದರು. ಏಶ್ಯನ್ ಗೇಮ್ಸ್ ನಲ್ಲಿ ಅದಿತಿ ಗೆದ್ದಿರುವ ಬೆಳ್ಳಿ ಪದಕ ಭಾರತೀಯ ಮಹಿಳಾ ಗಾಲ್ಪ್ ನಲ್ಲಿನ ಮಹತ್ವದ ಸಾಧನೆಯಾಗಿದೆ. ಏಶ್ಯನ್ ಗೇಮ್ಸ್ ನಲ್ಲಿ ಮಹಿಳಾ ಗಾಲ್ಫ್ ನಲ್ಲಿ ಭಾರತವು ಮೊತ್ತ ಮೊದಲ ಬಾರಿ ಪದಕ ಜಯಿಸಿದೆ. ಈ ಹಿಂದೆ ಭಾರತವು 1982 ಹಾಗೂ 2002ರಲ್ಲಿ ಪುರುಷರ ಗಾಲ್ಫ್ ನಲ್ಲಿ ವೈಯಕ್ತಿಕ ಚಿನ್ನದ ಪದಕ ಜಯಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News