ರಾಹುಲ್ ಗಾಂಧಿ ಶಿಕ್ಷೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ವರ್ಗಾವಣೆ

Update: 2023-08-11 07:12 GMT

 Justice Hemant M Prachchhak, Photo: Twitter 

ಹೊಸದಿಲ್ಲಿ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರ ಶಿಕ್ಷೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ನ ನ್ಯಾಯಮೂರ್ತಿ ಹೇಮಂತ್ ಎಂ. ಪ್ರಚ್ಚಕ್ ಅವರನ್ನು ಪಾಟ್ನಾ ಹೈಕೋರ್ಟ್ ಗೆ ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.

ಸುಪ್ರೀಂ ಕೋರ್ಟ್ ಕೊಲಿಜಿಯಂನಿಂದ ವರ್ಗಾವಣೆಗೆ ಶಿಫಾರಸು ಮಾಡಿದ 23 ನ್ಯಾಯಾಧೀಶರಲ್ಲಿ ಹೇಮಂತ್ ಕೂಡ ಒಬ್ಬರಾಗಿದ್ದು ಕಳೆದ ರಾತ್ರಿ ಸುಪ್ರೀಂ ಕೋರ್ಟ್ ವೆಬ್ ಸೈಟ್ ನಲ್ಲಿ ಹಾಕಲಾದ ದಾಖಲೆಯ ಪ್ರಕಾರ, "ಉತ್ತಮ ನ್ಯಾಯದಾನ ವ್ಯವಸ್ಥೆಯನ್ನು ಖಾತ್ರಿಪಡಿಸುವುದಕ್ಕಾಗಿ" ವರ್ಗಾವಣೆಗಳನ್ನು ಕೊಲಿಜಿಯಂ ಶಿಫಾರಸು ಮಾಡಿದೆ.

ನ್ಯಾಯಮೂರ್ತಿ ಹೇಮಂತ್ ಎಂ. ಪ್ರಚ್ಚಕ್ ಅವರು ಜುಲೈನಲ್ಲಿ 123 ಪುಟಗಳ ತೀರ್ಪಿನಲ್ಲಿ ರಾಹುಲ್ ಗಾಂಧಿಯವರ ಮನವಿಯನ್ನು ತಿರಸ್ಕರಿಸಿದ್ದರು.

ಈ ಹಿಂದೆ, 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರನ್ನು ಸಮರ್ಥಿಸುವ ವಕೀಲರ ತಂಡದಲ್ಲಿ ನ್ಯಾಯಮೂರ್ತಿ ಪ್ರಚ್ಚಕ್ ಒಬ್ಬರಾಗಿದ್ದರು.

ನ್ಯಾಯಮೂರ್ತಿ ಪ್ರಚ್ಚಕ್ ಅವರು ಗುಜರಾತ್ ಹೈಕೋರ್ಟ್ ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು ಹಾಗೂ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಅಡಿಯಲ್ಲಿ ಗುಜರಾತ್ ಸರಕಾರದ ಸಹಾಯಕ ವಕೀಲರಾಗಿ ಕೆಲಸ ಮಾಡಿದ್ದರು. 2015 ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಒಂದು ವರ್ಷದ ನಂತರ ಅವರನ್ನು ಗುಜರಾತ್ ಹೈಕೋರ್ಟ್ ಗೆ ಕೇಂದ್ರ ಸರಕಾರದ ಸ್ಥಾಯಿ ವಕೀಲರಾಗಿ ನೇಮಿಸಲಾಯಿತು. ಅವರು 2019 ರವರೆಗೆ ಈ ಹುದ್ದೆಯಲ್ಲಿದ್ದರು.

2021 ರಲ್ಲಿ ಅವರು ಗುಜರಾತ್ ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು.

ಮಾನನಷ್ಟ ಮೊಕದ್ದಮೆಯಲ್ಲಿನ ಶಿಕ್ಷೆಯ ವಿರುದ್ಧ ರಾಹುಲ್ ಗಾಂಧಿಯ ಮೇಲ್ಮನವಿಯನ್ನು ಪರಿಗಣಿಸಲು ನಿರಾಕರಿಸಿದ್ದ ನ್ಯಾಯಮೂರ್ತಿ ಗೀತಾ ಗೋಪಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದ್ದ ನ್ಯಾಯಮೂರ್ತಿ ಸಮೀರ್ ದವೆ ಸೇರಿದಂತೆ ಗುಜರಾತ್ ಹೈಕೋರ್ಟ್ ನ ಇತರ ಮೂವರು ನ್ಯಾಯಾಧೀಶರನ್ನು ವರ್ಗಾವಣೆ ಮಾಡಲು ಕೊಲಿಜಿಯಂ ಶಿಫಾರಸು ಮಾಡಿದೆ.

ಇತ್ತೀಚೆಗೆ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆ ತನ್ನ ಗರ್ಭಧಾರಣೆಯನ್ನು ತೆಗೆಯಲು ಅನುಮತಿಗಾಗಿ ಮಾಡಿದ ಮನವಿಯ ವಿಚಾರಣೆಯ ವೇಳೆ "ಮನುಸ್ಮೃತಿ" ಉಲ್ಲೇಖಿಸಿದ್ದ ಜಸ್ಟಿಸ್ ಸಮೀರ್ ದವೆ ವಿವಾದಕ್ಕೆ ಒಳಗಾಗಿದ್ದರು. ದವೆಯವರನ್ನು ಗುಜರಾತ್ ಹೈಕೋರ್ಟ್ ನಿಂದ ರಾಜಸ್ಥಾನ ಹೈಕೋರ್ಟ್ ಗೆ ವರ್ಗಾವಣೆ ಮಾಡಲಾಗಿದೆ.

ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ನ  ನ್ಯಾಯಾಧೀಶರು ಹಾಗೂ ಅಲಹಾಬಾದ್ ಹೈಕೋರ್ಟಿನ  ಒಬ್ಬರು ಆಗಸ್ಟ್ 3 ರ ಕೊಲಿಜಿಯಂ ನಿರ್ಣಯದ ಒಂಬತ್ತು ಹೆಸರುಗಳ ಪಟ್ಟಿಯಲ್ಲಿ ದ್ದಾರೆ.

ಆಗಸ್ಟ್ 3 ರಂದು ನಡೆದ ಸಭೆಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನೊಳಗೊಂಡ ಕೊಲಿಜಿಯಂ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ನಿನ್ನೆ ಆಗಸ್ಟ್ 10 ರಂದು ನಡೆದ ಸಭೆಯಲ್ಲಿ ಇನ್ನೂ 14 ಹೆಸರುಗಳನ್ನು ವರ್ಗಾವಣೆಗೆ  ಶಿಫಾರಸು ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News