DSBK-ಮಿಡ್ಲ್ ಈಸ್ಟ್ ಚಾಂಪಿಯನ್‌ಶಿಪ್‌ನ ನೂತನ ರೇಸ್ ತಾಂತ್ರಿಕ ನಿರ್ದೇಶಕರಾಗಿ ಫ್ಯಾಬಿಯೊ ಉಸೆಲ್ಲಿ

Update: 2024-07-08 08:28 GMT

Photo: corsedimoto.com

ದುಬೈ: ಕನ್ನಡಿಗ, ಅನಿವಾಸಿ ಭಾರತೀಯ ಉದ್ಯಮಿ ನಾಸಿರ್ ಸೈಯದ್ ಅವರು ಸ್ಥಾಪಿಸಿದ ಪ್ರಮುಖ ಬೈಕಿಂಗ್ ವೇದಿಕೆ ಡಿಎಸ್‌ಬಿಕೆ ತನ್ನ ನೂತನ ರೇಸ್ ಟೆಕ್ನಿಕಲ್ ಡೈರೆಕ್ಟರ್ ಆಗಿ ಇಟಲಿಯ ಫ್ಯಾಬಿಯೊ ಉಸೆಲ್ಲಿ ಅವರನ್ನು ನೇಮಕ ಮಾಡಿದೆ. ಸೂಪರ್‌ ಸ್ಪೋರ್ಟ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಮೊಟೊಝೂ ಮಿ ಏರ್ ರೇಸಿಂಗ್‌ನ ತಂಡದ ಮುಖ್ಯಸ್ಥರಾಗಿರುವ ಉಸೆಲ್ಲಿ, ಡಿಎಸ್‌ಬಿಕೆ ಮಿಡಲ್ ಈಸ್ಟ್ ಚಾಂಪಿಯನ್‌ಶಿಪ್‌ಗೆ ತಮ್ಮ ಅನುಭವವನ್ನು ಧಾರೆಯೆರೆಯಲಿದ್ದಾರೆ. ಡಿಎಸ್‌ಬಿಕೆಗೆ ಅವರ ಆಗಮನವು ಮಧ್ಯಪ್ರಾಚ್ಯದಲ್ಲಿ ಬೈಕ್ ರೇಸಿಂಗ್‌ನ ಗುಣಮಟ್ಟವನ್ನು ಹೆಚ್ಚಿಸಲಿದೆ ಎಂದು ನಾಸಿರ್ ಸೈಯದ್ ಹೇಳಿದ್ದಾರೆ.

"ಸೂಪರ್‌ಸ್ಪೋರ್ಟ್ ವರ್ಲ್ಡ್ ಚಾಂಪಿಯನ್‌ಶಿಪ್‌ ಮುಗಿದ ನಂತರ ದುಬೈನಲ್ಲಿ ಮೊದಲ ರೇಸ್ ನಡೆಯಲಿದೆ. ಈ ಋತುವಿನಂತೆಯೇ ಅತ್ಯುತ್ತಮ ರೈಡರ್‌ಗಳು ಮುಂಚೂಣಿಯಲ್ಲಿರುವ ಗುರಿಯೊಂದಿಗೆ Motozoo ಜೊತೆಗಿನ ಬದ್ಧತೆ ಕನಿಷ್ಠ ಎರಡು ವರ್ಷಗಳ ಕಾಲ ಮುಂದುವರಿಯುತ್ತದೆ. ಮಧ್ಯಪ್ರಾಚ್ಯ ಚಾಂಪಿಯನ್‌ಶಿಪ್‌ನಲ್ಲಿನ ಪಾತ್ರವು ಹೊಸ ಸವಾಲುಗಳೊಂದಿಗೆ ನನ್ನನ್ನು ಆಕರ್ಷಿಸುತ್ತಿದೆ. ನಾನು ಎಲ್ಲವನ್ನು ಸಮರ್ಥವಾಗಿ ನಿರ್ವಹಿಸ ಬಲ್ಲೆ” ಎಂದು ಫ್ಯಾಬಿಯೊ ಉಸೆಲ್ಲಿ ಹೇಳಿದ್ದಾರೆ.

ಬೈಕ್‌ ಪ್ರಿಯರಾಗಿದ್ದ ಉಸೆಲ್ಲಿ ಅವರು ದುಬೈಗೆ ಬಂದಾಗ ಬೈಕ್‌ ರೇಸ್‌ ಟ್ರಾಕ್‌ ನೋಡಲು ಹೋಗಿದ್ದರು. ದುಬೈನ ಬೈಕ್‌ ರೇಸ್ ಜಗತ್ತಿನ ವಾಸ್ತವವನ್ನು ತಿಳಿದುಕೊಳ್ಳುವ ಕುತೂಹಲ ಅವರಿಗೆ ಹುಟ್ಟಿತು. ಪ್ರಸಿದ್ಧ ಬೈಕ್‌ ತಯಾರಕ ಕಂಪೆನಿ ಕವಾಸಕಿಯ ದುಬೈ ಘಟಕ, ದುಬೈನಲ್ಲಿ ಅದಾಗಲೇ ನೆಲೆಸಿದ್ದ ಇಟಲಿ ಮೂಲದ ಜನರ ಭೇಟಿಯು ಸ್ಥಳೀಯ ಬೈಕ್‌ ರೇಸಿಂಗ್ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಯಿತು. ದುಬೈ ತಾಪಮಾನ ಹೆಚ್ಚಿದ್ದರೂ, ಉಸೆಲ್ಲಿ ಅದಕ್ಕೀಗ ಹೊಂದಿಕೊಂಡಿದ್ದಾರೆ. ದುಬೈನಲ್ಲೇ ನೆಲೆಸಿರುವ ಅವರು ಮೊಟೊಝೂ ಚಟುವಟಿಕೆಗಳಿಗೆ ಅನುಗುಣವಾಗಿ ದುಬೈ ಮತ್ತು ಇಟಲಿಯಲ್ಲಿ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ.

ಉಸೆಲ್ಲಿ ಅವರು ದುಬೈನಲ್ಲಿ ಮೋಟಾರ್‌ಸೈಕ್ಲಿಂಗ್ ಅಭಿವೃದ್ಧಿಪಡಿಸಲು ಉತ್ಸುಕರಾಗಿದ್ದಾರೆ. "ನನ್ನ ಗುರಿಯು ದುಬೈನಲ್ಲಿ ಮೋಟರ್‌ ಸೈಕ್ಲಿಂಗ್ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ದುಬೈನಲ್ಲಿ ಮೋಟಾರ್‌ಸೈಕ್ಲಿಂಗ್‌ನಲ್ಲಿ ಅಭಿವೃದ್ಧಿ ಸಾಧಿಸುವುದು" ಎಂದು ಅವರು ಹೇಳಿದ್ದಾರೆ. ಚಾಂಪಿಯನ್‌ಶಿಪ್‌ನಲ್ಲಿ ಕವಾಸಕಿ ಬ್ರಾಂಡ್‌ ಗಾಗಿ ಕಿಟ್‌ಗಳನ್ನು ಉಸೆಲ್ಲಿ ರಚಿಸುತ್ತಾರೆ. ಇದು ದುಬೈನಲ್ಲಿ ರೇಸಿಂಗ್ ಗೆ ಬರುವ ಇಟಲಿಯವರನ್ನು ಒಳಗೊಂಡಂತೆ ಅಂತರರಾಷ್ಟ್ರೀಯ ಸವಾರರನ್ನು ಆಕರ್ಷಿಸಬಹುದು. ಮೋಟಾರ್‌ಸೈಕ್ಲಿಂಗ್ ಗೆ ಸ್ಥಳೀಯರು ಮತ್ತು ಅಂತರಾಷ್ಟ್ರೀಯ ಆಸಕ್ತರನ್ನು ಕರೆ ತರುವುದೇ ನಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ.

ಸೂಪರ್ ಬೈಕ್ ಉತ್ಸಾಹಿಗಳ ವೇದಿಕೆ DSBK-UAE:

ಡಿಎಸ್‌ಬಿಕೆ-ಮಿಡ್ಲ್ ಈಸ್ಟ್ ಚಾಂಪಿಯನ್‌ಶಿಪ್ ಅನ್ನು ಕನ್ನಡಿಗ ಎನ್‌ಆರ್‌ಐ ನಾಸಿರ್ ಸೈಯದ್ ಅವರು ದುಬೈಯಲ್ಲಿ ಸ್ಥಾಪಿಸಿದ್ದಾರೆ. ಸೂಪರ್‌ಬೈಕ್ ರೇಸರ್‌ಗಳು, ಅವರ ಅಭಿಮಾನಿಗಳು ಮತ್ತು ಪ್ರಮುಖ ಬ್ರ್ಯಾಂಡ್‌ಗಳಿಗೆ DSBK-UAEಯು ಗಮನಾರ್ಹ ವೇದಿಕೆಯಾಗಿದೆ. ಸಂಸ್ಥೆಯು ತನ್ನ ಚೊಚ್ಚಲ ರೇಸಿಂಗ್ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಮೋಟಾರ್‌ಸೈಕ್ಲಿಂಗ್ ಸಮುದಾಯವನ್ನು ಒಂದೇ ವೇದಿಕೆಗೆ ತಂದಿದೆ.

CHS ಕ್ರಿಯೇಟಿವ್ ಹೌಸ್ ಮತ್ತು VME ವಾಲ್ವ್ಸ್ ಫ್ಯಾಕ್ಟರಿ LLC ಸೇರಿದಂತೆ ದುಬೈನಲ್ಲಿ ಹಲವಾರು ಯಶಸ್ವಿ ಉದ್ಯಮಗಳನ್ನು ನಿರ್ವಹಿಸುತ್ತಿರುವ ನಾಸಿರ್ ಸೈಯದ್, DSBK - D ಸೂಪರ್ ಬೈಕ್ ರೇಸಿಂಗ್ ಅನ್ನು ಮುನ್ನಡೆಸುತ್ತಿದ್ದಾರೆ. ಸೈಯದ್ ಅವರು ದುಬೈಗೆ ತೆರಳಿದ ನಂತರ ಸೂಪರ್‌ಬೈಕ್ ರೇಸಿಂಗ್‌ ಪ್ರಯಾಣ ಆರಂಭಿಸಿದರು. ಬೈಕ್‌ ರೇಸಿಂಗ್ ಕ್ರೀಡೆಯ ಅಪಾಯಗಳು ಮತ್ತು ಅದಕ್ಕೆ ತಗುಲುವ ವೆಚ್ಚಗಳ ಹೊರತಾಗಿಯೂ ಅವರು ಅದರಲ್ಲಿ ತಮ್ಮ ಅಸಕ್ತಿ ಬೆಳೆಸಿ ಕೊಂಡರು. ನಿರಂತರ ಪರಿಶ್ರಮದ ಫಲವಾಗಿ ನಾಸಿರ್ ಸೈಯದ್ ಅವರು ಯುಎಇ ರಾಷ್ಟ್ರೀಯ ಚಾಂಪಿಯನ್‌ಶಿಪ್ ಮತ್ತು ಬಹ್ರೇನ್ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಂತಹ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದು, ಅಗ್ರ ರೇಸರ್ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News