ಅಫ್ಘಾನಿಸ್ತಾನದ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ

ಅರುಣ್ ಜೇಟ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 9ನೇ ಪಂದ್ಯ ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ

Update: 2023-10-11 15:39 GMT

PHOTO : cricketworldcup.com

ಹೊಸದಿಲ್ಲಿ : ಇಲ್ಲಿನ ಅರುಣ್ ಜೇಟ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 9ನೇ ಪಂದ್ಯ ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.

ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ದಾಖಲೆಯ ಸ್ಫೋಟಕ 131 ರನ್ ಸಿಡಿಸಿದರೆ, ತವರು ಆಂಗಳದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿದರು.

ಅಫ್ಘಾನಿಸ್ತಾನ ನೀಡಿದ 273 ರನ್ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಕ್ಕೆ ಒಳ್ಳೆಯ ಆರಂಭ ದೊರೆಯಿತು. ಮೊದಲ ಕ್ರಮಾಂಕದಲ್ಲಿ ಬಂದ ರೋಹಿತ್ ಶರ್ಮಾ ಸ್ಫೋಟಕ ಶತಕ ಸಿಡಿಸಿ ಅಫ್ಘಾನ್ ಗೆಲುವಿನ ಆಸೆಗೆ ತಣ್ಣೀರು ಎರಚಿದರು. 84 ಎಸೆತ ಎದುರಿಸಿದ ರೋಹಿತ್ 16 ಬೌಂಡರಿ 5 ಸಿಕ್ಸರ್ ಸಹಿತ 131 ರನ್ ಗಳ ಆಕರ್ಷಕ ಬ್ಯಾಟಿಂಗ್ ಸ್ಟೇಡಿಯಂ ನಲ್ಲಿದ್ದ ಅಭಿಮಾನಿಗಳ ಮನ ತಣಿಸಿತು. ಎರಡನೇ ಕ್ರಮಾಂಕದ ಬ್ಯಾಟರ್ ಇಶಾನ್ ಕಿಶನ್ 5 ಬೌಂಡರಿ 2 ಸಿಕ್ಸರ್ ಸಹಿತ 47 ಬಾರಿಸಿ ಸ್ಪಿನ್ನರ್ ರಶೀದ್ ಖಾನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಗೆ ಬಂದಾಗ ಸ್ಟೇಡಿಯಂ ನಲ್ಲಿ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿತು. ತವರು ಮೈದಾನದಲ್ಲಿ ವಿರಾಟ್ ಕೊಹ್ಲಿ 6 ಬೌಂಡರಿ ಸಹಿತ 55 ರನ್ ಬಾರಿಸಿ ಅಜೇಯರಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರಿಗೆ ಶ್ರೇಯಸ್ ಐಯ್ಯರ್ 25 ಗಳಿಸಿ ಸಾಥ್ ನೀಡಿದರು.

ಅಫ್ಘಾನಿಸ್ತಾನ ಪರ ರಶೀದ್ ಖಾನ್ 2 ಪ್ರಮುಖ ವಿಕೆಟ್ ಕಬಳಿಸಿದರು.

ಮೊದಲು ಟೀಮ್ ಇಂಡಿಯಾ ವಿರುದ್ಧ ಟಾಸ್ ಗೆದ್ದ ಅಫ್ಘಾನಿಸ್ತಾನ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಪೇರಿಸಿತ್ತು. ಅಫ್ಘಾನ್ ಗೆ ಉತ್ತಮ ಆರಂಭ ದೊರೆಯಲಿಲ್ಲ. ಇಬ್ರಾಹೀಂ ಝರ್ದಾನ್ 22 ರನ್ ಗೆ ಜಸ್ಪ್ರಿತ್ ಬೂಮ್ರ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ರಾಹುಲ್ ಗೆ ಕ್ಯಾಚ್ ನೀಡಿ ಔಟ್ ಆದರೆ ರಹ್ಮನುಲ್ಲ ಗುರ್ಬಜ್ 21 ರನ್ ಗೆ ಹಾರ್ದಿಕ್ ಗೆ ವಿಕೆಟ್ ಒಪ್ಪಿಸಿದರು .ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ರಹಮತ್ ಶಾ 16 ರನ್ ಗೆ ಶಾರ್ದೂಲ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂ ಆಗಿ ನಿರಾಶೆ ಮೂಡಿಸಿದರು. ಬಳಿಕ ಬ್ಯಾಟಿಂಗ್ ಬಂದ ನಾಯಕ ಹಸ್ಮ ತುಲ್ಲಾ ಶಾಹಿದಿ ಮತ್ತು ಒಮರ್ಜೈ 121 ರನ್ ಗಳ ಜೊತೆಯಾಟ ನೀಡಿದರು.ಒಮರ್ಜೈ (62 ) ಅರ್ಧಶತಕ ಗಳಿಸಿ ಪಾಂಡ್ಯ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡರು. ಹಸ್ಮ ತುಲ್ಲಾ ಶಾಹಿದಿ ನಿರ್ಣಾಯಕ 80 ರನ್ ಕೊಡುಗೆ ನೀಡಿದರು. ಟೀಮ್ ಇಂಡಿಯಾ ಪರ ಜಸ್ಪ್ರಿತ್ ಬೂಮ್ರ 4 ವಿಕೆಟ್ ಪಡೆದರೆ ಹಾರ್ದಿಕ ಪಾಂಡ್ಯ 2 ವಿಕೆಟ್ ಶಾರ್ದೂಲ ಠಾಕೂರ್, ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಕಬಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News