19 ವರ್ಷದಿಂದ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಉದ್ಯೋಗಿ ಮರಳಿ ತವರಿಗೆ
ಹೊಸದಿಲ್ಲಿ : ಕಳೆದ 19 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಪ್ರಜೆಯಾದ ಅಶೋಕ್ ಕುಮಾರ್ ಶುಕ್ರವಾರ, ಎಪ್ರಿಲ್ 5ರಂದು ಭಾರತಕ್ಕೆ ಮರಳಿದರು.
ತವರಿಗೆ ಮರಳಲು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ನೆರವು ಕೋರಿದ ನಂತರ ಕುಮಾರ್ ಭಾರತಕ್ಕೆ ಮರಳಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಸಮದಲ್ಲಿ ಪೋಸ್ಟ್ ಮಾಡಿರುವ ಭಾರತೀಯ ರಾಯಭಾರ ಕಚೇರಿಯು, ಅಧಿಕಾರಿಗಳೊಂದಿಗಿರುವ ಕುಮಾರ್ ಹಾಗೂ ರಿಯಾಧ್ ನಿಂದ ದಿಲ್ಲಿ ಹಾಗೂ ದಿಲ್ಲಿಯಿಂದ ಲಕ್ನೊಗೆ ಪ್ರಯಾಣಿಸುವ ಸಂಪರ್ಕ ವಿಮಾನಗಳ ಬೋರ್ಡಿಂಗ್ ಪಾಸ್ ಅನ್ನು ಹಂಚಿಕೊಂಡಿದೆ.
“ಭಾರತೀಯ ಉದ್ಯೋಗಿ ಅಶೋಕ್ ಕುಮಾರ್ ಗೆ 19 ವರ್ಷಗಳ ನಂತರ ಭಾರತಕ್ಕೆ ಮರಳಲು ರಾಯಭಾರ ಕಚೇರಿಯು ನೆರವು ನೀಡಿದೆ. ಅವರು ಇಂದು ಭಾರತಕ್ಕೆ ಪ್ರಯಾಣಿಸಿದರು” ಎಂದು ಹೇಳಿದೆ.
ಈ ವಿಷಯದಲ್ಲಿ ನೆರವು ನೀಡಿದ ಸ್ವಯಂಸೇವಕರು ಹಾಗೂ ಸೌದಿ ಅರೇಬಿಯಾದ ಪ್ರಾಧಿಕಾರಗಳಿಗೆ ಭಾರತೀಯ ರಾಯಭಾರ ಕಚೇರಿಯು ಧನ್ಯವಾದಗಳನ್ನು ಸಲ್ಲಿಸಿದೆ.
ಇದಕ್ಕೂ ಮುನ್ನ ಮಾರ್ಚ್ 30ರಂದು ಕಳೆದ 24 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಮಹಿಳೆಯು ಭಾರತಕ್ಕೆ ಮರಳಲು ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನೆರವು ನೀಡಿತ್ತು.
ಇದಾದ ನಂತರ, ನವೆಂಬರ್ 16ರಂದು ಕಳೆದ 31 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಪ್ರಜೆ ಬಾಲಚಂದ್ರನ್ ಪಿಳ್ಳೈ ಎಂಬುವವರು ರಿಯಾಧ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ನೆರವಿನಿಂದ ತವರಿಗೆ ಮರಳಿದ್ದರು.