ಕುವೈಟ್ ನೂತನ ಅಮೀರ್ ಶೇಖ್ ಮಶಾಲ್ ಅವರ ಕುರಿತ ಮಾಹಿತಿ ಇಲ್ಲಿದೆ...

Update: 2023-12-17 10:41 GMT

ಅಮೀರ್ ಶೇಖ್ ಮಶಾಲ್ (Photo credit: KUNA)

ಕುವೈಟ್: ಕುವೈಟ್ ನ ಯುವರಾಜ ಶೇಖ್ ಮಶಾಲ್ ಅಲ್-ಅಹ್ಮದ್ ಅಲ್ ಸಬಾಹ್ ಅವರನ್ನು ದಿವಂಗತ ಶೇಖ್ ನವಾಫ್ ಅಲ್ -ಅಹ್ಮದ್-ಸಬಾಹ್ ಅವರ ಉತ್ತರಾಧಿಕಾರಿಯಾಗಿ ದೇಶದ ಅಮೀರ್ ಎಂದು ನೇಮಕಗೊಳಿಸಲಾಗಿದೆ. ಮೂರು ವರ್ಷಗಳ ಹಿಂದಷ್ಟೇ ಅಮೀರ್ ಆಗಿ ಅಧಿಕಾರ ಸ್ವೀಕರಿಸಿದ್ದ ಶೇಖ್ ನವಾಫ್(86) ಶನಿವಾರ ನಿಧನರಾಗಿದ್ದರು. ಅವರ ಸಾವಿನ ಕಾರಣವನ್ನು ತಕ್ಷಣ ಬಹಿರಂಗಗೊಳಿಸಲಾಗಿಲ್ಲ,ಆದರೆ ತುರ್ತು ಹೃದಯ ಸಮಸ್ಯೆಯಿಂದಾಗಿ ಅವರನ್ನು ನ.29ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಉಪ ಪ್ರಧಾನಿ ಹಾಗೂ ಸಂಪುಟ ವ್ಯವಹಾರಗಳ ರಾಜ್ಯ ಸಚಿವ ಇಸಾ-ಅಲ್-ಕಂದಾರಿ ಅವರು ನೂತನ ಅಮೀರ್ ಆಗಿ ಶೇಖ್ ಮಶಾಲ್ ನೇಮಕವನ್ನು ಪ್ರಕಟಿಸಿದ್ದಾರೆ.

2021ರಿಂದ ಯುವರಾಜ ಶೇಖ್ ಮಶಾಲ್ (83) ಅವರೇ ದೇಶದ ಆಡಳಿತವನ್ನು ನಡೆಸುತ್ತಿದ್ದರು. ನಂತರ ಶೇಖ್ ನವಾಫ್ ತನ್ನ ಅನಾರೋಗ್ಯದಿಂದಾಗಿ ತನ್ನ ಹೆಚ್ಚಿನ ಕರ್ತವ್ಯಗಳನ್ನೂ ಶೇಖ್ ಮಶಾಲ್ ಅವರಿಗೆ ವಹಿಸಿದ್ದರು.

ಕುವೈಟ್ ಸಂವಿಧಾನದಡಿ ಯುವರಾಜರು ಸ್ವಯಂಚಾಲಿತವಾಗಿ ಅಮೀರ್ ಆಗುತ್ತಾರೆ. ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರು ಅಧಿಕಾರವನ್ನು ವಹಿಸಿಕೊಳ್ಳಬಹುದು. ನೂತನ ಅಮೀರ್ ಗೆ ತನ್ನ ಉತ್ತರಾಧಿಕಾರಿಯನ್ನು ಹೆಸರಿಸಲು ಒಂದು ವರ್ಷದವರೆಗೆ ಸಮಯಾವಕಾಶವಿದೆ.

ಕುವೈಟ್ ನ ಆಡಳಿತ ಕುಟುಂಬದ ಯುವ ಪೀಳಿಗೆಯು ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ನೂತನ ಅಮೀರ್ ಅವರಿಂದ ಯುವರಾಜ ಮತ್ತು ಪ್ರಧಾನಿಯ ಆಯ್ಕೆಯ ಮೇಲೆ ಎಲ್ಲರ ಕಣ್ಣು ನೆಟ್ಟಿರಲಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News