ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ : ಮಂಗಳೂರಿನ ಒಂದೇ ಕುಟುಂಬದ ನಾಲ್ವರು ಮೃತ್ಯು

Update: 2024-03-21 15:09 GMT

ಮುಲ್ಕಿ: ಕತಾರ್‌ ನಿಂದ ಮದೀನಾಕ್ಕೆ ಉಮ್ರಾ ನಿರ್ವಹಿಸಲು ತೆರಳುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿ 3 ತಿಂಗಳ ಹಸುಗೂಸು ಸೇರಿ ಒಂದೇ ಮನೆಯ ನಾಲ್ಕು ಮಂದಿ ಮೃತಪಟ್ಟಿರುವ ಘಟನೆ ರಿಯಾದ್‌ ಹೊರವಲಯದ ಝಲ್ಫಾ ಎಂಬಲ್ಲಿ ಬುಧವಾರ ರಾತ್ರಿ ವರದಿಯಾಗಿದೆ.

ಮೃತರನ್ನು ಹಳೆಯಂಗಡಿ ತೋಕೂರು ನಿವಾಸಿ ಶಮೀಮ್‌ ಮತ್ತು ಝರೀನಾ ದಂಪತಿಯ ಪುತ್ರಿ ಹಿಬಾ ( 29) ಆಕೆಯ ಪತಿ ಮುಹಮ್ಮದ್‌ ರಮೀಝ್‌ (34) ಮಕ್ಕಳಾದ ಆರೂಶ್‌ (3) ಮತ್ತು ರಾಹ ( 3 ತಿಂಗಳು) ಎಂದು ಗುರುತಿಸಲಾಗಿದೆ. ಅದೇ ಕಾರಿನಲ್ಲಿದ್ದ ಹಿಬಾ ಅವರ ಸಹೋದರಿ ಶಬ್ನಮ್‌ ಎಂಬವರ ಮಗಳು ಫಾತಿಮಾ (19) ಗಂಭೀಯ ಗಾಯಗೊಂಡಿದ್ದು, ಆಕೆಯನ್ನು ರಿಯಾದ್‌ ನ ಆಸ್ಪತ್ರೆಯಲ್ಲಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಪೈಕಿ ಅಪಘಾತಕ್ಕೀಡಾಗಿದ್ದ ಕಾರಿನಲ್ಲಿದ್ದ ಹಿಬಾ ಅವರ ಇನ್ನೋರ್ವ ಸಹೋದರಿ ಲುಬ್ನಾ ಅವರ ಮಗ ಈಸ (4) ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ ಎಂದು ಕುಟುಂಬಸ್ಥರು ಸದಸ್ಯರು ಮಾಹಿತಿ ನೀಡಿದ್ದಾರೆ.

ಮೃತ ಹಿಬಾ ಅವರ ತಂದೆ ಶಮೀಮ್‌ ತಾಯಿ ಝರೀನ ಮತ್ತು ಮೊಮ್ಮಕ್ಕಳು ಒಂದು ಕಾರಿನಲ್ಲಿ ಮತ್ತು ಹಿಬಾ ತನ್ನ ಕುಟುಂಬದೊಂದಿಗೆ ಇನ್ನೊಂದು ಕಾರಿನಲ್ಲಿ ಮಂಗಳವಾರ ಫಜರ್‌ ನಮಾಝ್‌ ಮುಗಿಸಿಕೊಂಡು ಉಮ್ರಾ ಯಾತ್ರೆ ಆರಂಭಿಸಿದ್ದರು. ಮಂಗಳವಾರ ರಾತ್ರಿ ರಿಯಾದ್‌ ತಲುಪಿದ್ದ ಅವರು ಅಲ್ಲೇ ತನ್ನ ಕುಟುಂಸ್ಥರ ಮನೆಯಲ್ಲಿ ಉಳಿದುಕೊಂಡು ಬುಧವಾರ ಬೆಳಗ್ಗೆ ರಿಯಾದ್‌ ನಿಂದ ಮತ್ತೆ ಉಮ್ರಾ ಯಾತ್ರೆ ಆರಂಭಿಸಿದ್ದರು.

ರಮೀಝ್‌ ತನ್ನ ಪತ್ನಿ ಹಿಬಾ, ಮಕ್ಕಳಾದ ಆರೂಶ್‌, ರಾಹ ಮತ್ತು ಹಿಬಾ ಅವರ ಸಹೋದರಿಯರ ಮಕ್ಕಳಾದ ಫಾತಿಮಾ ಮತ್ತು ಈಸ ಜೊತೆ ಒಂದು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇನ್ನೊಂದು ಕಾರಿನಲ್ಲಿ ಹಿಬಾ ಅವರ ತಂದೆ ಶಮೀಮ್‌, ತಾಯಿ ಝರೀನಾ ಮೊದಲಾದವರು ಪ್ರಯಾಣಿಸುತ್ತಿದ್ದರು. ರಮೀಝ್‌ ಅವರು ಚಲಾಯಿಸುತ್ತಿದ್ದ ಕಾರು ರಿಯಾದ್ ನಿಂದ ತಾಯೀಫ್ ಗೆ ಹೋಗುವ ಮಾರ್ಗ ಮಧ್ಯದ ಸುಮಾರು 250 ಕಿ.ಮೀ. ದೂರದದಲ್ಲಿರುವ ಝುಲ್ಫಾ ಎಂಬಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆಯಿಂದ ಹಲವು ಮೀಟರ್‌ ಗಳಷ್ಟು ದೂರಕ್ಕೆ ಹಾರಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.

ಘಟನೆಯಿಂದ ರಮೀಝ್‌, ಹಿಬಾ ಮತ್ತು ಒಂದು ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಂದು ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಹಿಬಾ ಅವರ ಸಹೋದರಿಯ ಮಗಳು ಫಾತಿಮಾ ಗಂಭೀರ ಗಾಯಗೊಂಡಿದ್ದರೆ, ಮತ್ತೋರ್ವ ಸಹೋದರಿಯ ಮಗ ಈಸ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News