ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ; ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ಮೃತ್ಯು
ವಿಜಯವಾಡ: ಆಂಧ್ರಪ್ರದೇಶದ ಅನಿವಾಸಿ ಕುಟುಂಬವೊಂದರ ನಾಲ್ಕು ಸದಸ್ಯರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಶುಕ್ರವಾರ ಸೌದಿ ಅರೇಬಿಯಾದ ರಿಯಾದ್ ಬಳಿ ನಡೆದಿದೆ ಎಂದು Times of India ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕುವೈತ್ ನಲ್ಲಿ ಉದ್ಯೋಗಿಯಾಗಿರುವ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ತಾಲ್ಲೂಕಿನ ದಂಡು ಗೌಸ್ ಬಾಶಾ ಎಂಬುವವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸೌದಿ ಅರೇಬಿಯಾಗೆ ತೆರಳಿದ್ದರು. ಅಪಘಾತ ಸಂಭವಿಸಿದಾಗ ಅವರ ಕುಟುಂಬವು ಕುವೈತ್ ನಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿತ್ತು ಎಂದು ಹೇಳಲಾಗಿದೆ. ಅವರು ಪ್ರಯಾಣಿಸುತ್ತಿದ್ದ ಕಾರು ಟ್ರಕ್ ಒಂದಕ್ಕೆ ಢಿಕ್ಕಿ ಹೊಡೆದು, ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಂಧ್ರಪ್ರದೇಶ ಅನಿವಾಸಿ ತೆಲುಗು ಸಮಾಜ(APNRTS)ದ ಹಿರಿಯ ಅಧಿಕಾರಿ ಎಂ.ವೆಂಕಟರಮಣ, ಗೌಸ್ ಅವರು ಬಾಲಕರಾಗಿದ್ದಾಗಲೇ ಅವರ ಕುಟುಂಬವು ಬೆಂಗಳೂರಿಗೆ ವಲಸೆ ಹೋಗಿತ್ತು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿದ ನಂತರ, 2009ರಲ್ಲಿ ಎಂಜಿನಿಯರಿಂಗ್ ಪದವಿಯನ್ನು ಚೆನ್ನೈನಲ್ಲಿನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಮುಂದುವರಿಸಿದ್ದರು. ವ್ಯಾಸಂಗ ಪೂರ್ಣಗೊಂಡ ನಂತರ ಪುಣೆಯಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು Times of India ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ನಂತರ ಅವರು, 2019ರಲ್ಲಿ ಲಂಡನ್ನಿನ ಆ್ಯಂಗ್ಲಿಯಾ ರಸ್ಕಿನ್ ವಿಶ್ವವಿದ್ಯಾಲಯದಲ್ಲಿ ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಇದಾದ ನಂತರ ಕುವೈತ್ ಗೆ ತೆರಳಿದ ಗೌಸ್, ಹಲವಾರು ಕಂಪನಿಗಳಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.
ಸುಮಾರು 10 ದಿನಗಳ ಹಿಂದೆ ತಾವು ಖರೀದಿಸಿದ್ದ ನೂತನ ಕಾರಿನೊಂದಿಗೆ ಸೌದಿ ಅರೇಬಿಯಾದ ಮಕ್ಕಾಗೆ ಭೇಟಿ ನೀಡಲು ತಮ್ಮ ಪತ್ನಿ ತಬಾರಕ್ ಸರ್ವಾರ್ (31) ಹಾಗೂ ಇಬ್ಬರು ಪುತ್ರರಾದ ಎಶಾನ್ (4) ಮತ್ತು ದಮೀಲ್ (3) ಅವರೊಂದಿಗೆ ಗೌಸ್ ತೆರಳಿದ್ದರು.
ಮಕ್ಕಾದಲ್ಲಿ ಉಮ್ರಾ ನಿರ್ವಹಿಸಿ, ಮದೀನಾಕ್ಕೆ ಭೇಟಿ ನೀಡಿದ ನಂತರ ಅವರ ಕುಟುಂಬವು ಕುವೈತ್ ನಲ್ಲಿನ ತಮ್ಮ ನಿವಾಸಕ್ಕೆ ಹಿಂದಿರುಗುವಾಗ ಈ ದುರ್ಘಟನೆ ಸಂಭವಿಸಿದೆ. ರಿಯಾದ್ ನಿಂದ ಸುಮಾರು 120 ಕಿಮೀ ದೂರದಲ್ಲಿರುವ ಹಫ್ನಾ-ತುವಾಖ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದೆ.
ಈ ದುರ್ಘಟನೆಯ ಸಂಗತಿ ತಿಳಿದು ಆಘಾತಕ್ಕೀಡಾಗಿರುವ ಗೌಸ್ ಪೋಷಕರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ.
ಮೃತದ ಅವಶೇಷಗಳನ್ನು ತಾಯ್ನಾಡಿಗೆ ಮರಳಿಸಲು ರಿಯಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಆಂಧ್ರಪ್ರದೇಶ ಅನಿವಾಸಿ ತೆಲುಗು ಸಮಾಜವು ಸಮನ್ವಯ ಕಾರ್ಯ ನಡೆಸುತ್ತಿದೆ ಎಂದೂ ರಮಣ ರೆಡ್ಡಿ ತಿಳಿಸಿದ್ದಾರೆ.