ಹಜ್ ಯಾತ್ರೆ ವೇಳೆ 1301 ಮಂದಿ ಮೃತ್ಯು: ನೋಂದಾಯಿಸದ ಯಾತ್ರಿಗಳೇ ಅಧಿಕ; ವರದಿ
ರಿಯಾದ್: ಈ ಬಾರಿಯ ಹಜ್ ಯಾತ್ರೆ ವೇಳೆ 1301 ಯಾತ್ರಾರ್ಥಿಗಳು ಬಿಸಿಲ ಝಳದಿಂದ ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾ ಅಧಿಕೃತವಾಗಿ ಪ್ರಕಟಿಸಿದೆ. ಮೃತಪಟ್ಟವರಲ್ಲಿ ಶೇಕಡ 83ರಷ್ಟು ಮಂದಿ ಅನಧಿಕೃತ ಹಜ್ ಯಾತ್ರಿಗಳಾಗಿದ್ದು, ಹಜ್ ಯಾತ್ರೆ ಕೈಗೊಳ್ಳಲು ಅನುಮತಿ ಪಡೆದಿರಲಿಲ್ಲ. ಯಾವುದೇ ಸೂಕ್ತ ಆಸರೆ ಪಡೆಯದೇ ಸುಧೀರ್ಘ ಅಂತರವನ್ನು ಸುಡು ಬಿಸಿಲಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದರು ಎಂದು ಸೌದಿ ಪ್ರೆಸ್ ಏಜೆನ್ಸಿ ಹೇಳಿದೆ. ಕಳೆದ ವಾರ ಸಾವಿನ ಸಂಖ್ಯೆ 1100ನ್ನು ಮೀರಿದೆ ಎಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿತ್ತು.
ಈ ವರ್ಷದ ಹಜ್ ಯಾತ್ರೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಸೌದಿ ಆರೋಗ್ಯ ಸಚಿವ ಫಹದ್ ಅಲ್ ಜಲಾಜಿಲ್ ಹೇಳಿದ್ದಾರೆ. ಸೌದಿ ಆರೋಗ್ಯ ಸೇವಾ ವಿಭಾಗ 4.65 ಲಕ್ಷ ಮಂದಿಗೆ ಸೇವೆ ಒದಗಿಸಿದೆ. ಹಜ್ ಯಾತ್ರೆ ಕೈಗೊಳ್ಳಲು ಅಧಿಕೃತ ಅನುಮತಿಯನ್ನು ಪಡೆಯದ 1.41 ಲಕ್ಷ ಮಂದಿಗೂ ಚಿಕಿತ್ಸಾ ಸೇವೆ ಒದಗಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ಬಾರಿ 18 ಲಕ್ಷ ಮಂದಿ ಯಾತ್ರೆ ಕೈಗೊಂಡಿದ್ದು, ಈ ಪೈಕಿ 16 ಲಕ್ಷ ಮಂದಿ ಹೊರದೇಶದವರು. ಈ ಬಾರಿ ಮಕ್ಕಾದಲ್ಲಿ ತಾಪಮಾನ 51.8 ಡಿಗ್ರಿ ತಲುಪಿತ್ತು ಎಂದು ಸೌದಿ ಅಧಿಕಾರಿಗಳು ಹೇಳಿದ್ದಾರೆ.
ಏತನ್ಮಧ್ಯೆ ಮಕ್ಕಾಗೆ ಅಕ್ರಮ ಯಾತ್ರೆ ಆಯೋಜಿಸದ್ದ ಆರೋಪದಲ್ಲಿ 16 ಪ್ರವಾಸೋದ್ಯಮ ಕಂಪನಿಗಳ ಲೈಸನ್ಸ್ ರದ್ದುಪಡಿಸಲಾಗಿದೆ ಎಂದು ಈಜಿಪ್ಟ್ ಪ್ರಧಾನಿ ಮುಸ್ತಾಫಾ ಮದ್ಬೋಲಿ ಪ್ರಕಟಿಸಿದ್ದಾರೆ. ಜತೆಗೆ ಈ ಸಂಸ್ಥೆಗಳ ವ್ಯವಸ್ಥಾಪಕರನ್ನು ಸಾರ್ವಜನಿಕ ಅಭಿಯೋಜಕರಿಗೆ ಒಪ್ಪಿಸಲಾಗಿದೆ ಎಂದು ವಿವರಿಸಿದ್ದಾರೆ.