ಉಕ್ರೇನ್ ಯುದ್ಧ ಅಂತ್ಯಕ್ಕೆ ಟ್ರಂಪ್ ಪ್ರಾಮಾಣಿಕ ಆಶಯ ಹೊಂದಿದ್ದಾರೆ: ವ್ಲಾದಿಮಿರ್ ಪುಟಿನ್

Update: 2024-07-05 16:47 GMT

ವ್ಲಾದಿಮಿರ್ ಪುಟಿನ್ | PC : PTI 

 

ಮಾಸ್ಕೋ : ಅಮೆರಿಕದ ಮಾಜಿ ಪ್ರಧಾನಿ ಡೊನಾಲ್ಡ್ ಟ್ರಂಪ್ ಉಕ್ರೇನ್‍ನಲ್ಲಿನ ಯುದ್ಧವನ್ನು ಅಂತ್ಯಗೊಳಿಸುವ ಪ್ರಾಮಾಣಿಕ ಆಶಯವನ್ನು ಹೊಂದಿದ್ದಾರೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ಉಕ್ರೇನ್‍ನಲ್ಲಿನ ಯುದ್ಧವನ್ನು ಅಂತ್ಯಗೊಳಿಸಲು ತಾನು ಬಯಸುವುದಾಗಿ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯಲ್ಲಿ ಪ್ರಾಮಾಣಿಕತೆಯಿದೆ. ನಾವು ಇದನ್ನು ಗಂಭೀರವಾಗಿ ಪರಿಗಣಿಸಲಿದ್ದೇವೆ ಎಂದು ಕಝಕ್‍ಸ್ತಾನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಪುಟಿನ್ ಹೇಳಿದ್ದಾರೆ. `ಅವರು ಇದನ್ನು ಹೇಗೆ ಮಾಡುತ್ತಾರೆ ಎಂಬುದು ನಮಗೆ ತಿಳಿದಿಲ್ಲ. ಆದರೆ ಅವರು ಪ್ರಾಮಾಣಿಕ ಆಶಯ ಹೊಂದಿರುವುದು ಸ್ಪಷ್ಟವಾಗಿದೆ ಮತ್ತು ನಾವು ಅದನ್ನು ಬೆಂಬಲಿಸುತ್ತೇವೆ' ಎಂದವರು ಹೇಳಿದ್ದಾರೆ.

ರಶ್ಯ 2014ರಲ್ಲಿ ಸ್ವಾಧೀನ ಪಡಿಸಿಕೊಂಡಿರುವ ಕ್ರಿಮಿಯಾ ಪ್ರಾಂತವನ್ನು ಮತ್ತು ಇತ್ತೀಚೆಗೆ ಸ್ವಾಧೀನಪಡಿಸಿಕೊಂಡಿರುವ ಡೊನ್ಬಾಸ್ ಪ್ರದೇಶವನ್ನು ರಶ್ಯಕ್ಕೆ ಬಿಟ್ಟುಕೊಡುವ ಶಾಂತಿ ಒಪ್ಪಂದದ ಬಗ್ಗೆ ಟ್ರಂಪ್ ಖಾಸಗಿಯಾಗಿ ಉಲ್ಲೇಖಿಸಿದ್ದರು ಎಂದು ಎಪ್ರಿಲ್‍ನಲ್ಲಿ `ದಿ ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ.

ಈ ಮಧ್ಯೆ, ಉಕ್ರೇನ್‍ನ ಡೊನೆಟ್ಸ್ಕ್ ಪ್ರಾಂತದ ಚಾಸಿವ್‍ಯಾರ್‍ನ ನೋವಿ ಜಿಲ್ಲೆ ರಶ್ಯದ ವಶಕ್ಕೆ ಬಂದ ಬಳಿಕ ಅಲ್ಲಿಂದ ತನ್ನ ಸೇನೆ ಹಿಂದೆ ಸರಿದಿದೆ ಎಂದು ಸೇನೆಯ ವಕ್ತಾರರು ಹೇಳಿದ್ದಾರೆ.

ಚಾಸಿವ್ ಯಾರ್ ನಗರ ಅತ್ಯಂತ ಆಯಕಟ್ಟಿನ ಸ್ಥಳವಾಗಿದ್ದು ಕ್ರಮಟೊರಸ್ಕ್ ಮತ್ತು ಸ್ಲೊವಿಯಾಂಸ್ಕ್ ನಗರಗಳನ್ನು ಡೊನೆಟ್ಸ್ಕ್ ವಲಯದ ಮೂಲಕ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ನೋವಿ ಜಿಲ್ಲೆಯಲ್ಲಿದ್ದ ಉಕ್ರೇನ್ ಸೇನಾ ನೆಲೆಗಳು ಧ್ವಂಸಗೊಂಡಿದ್ದು ಶತ್ರುಗಳು ಭೂಮಿ ಮತ್ತು ಆಕಾಶದಿಂದ ನಿರಂತರ ದಾಳಿ ಮುಂದುವರಿಸಿದ್ದು ಈ ಪ್ರದೇಶದಲ್ಲಿ ಯಾವುದೇ ಕಟ್ಟಡ ಸುಸ್ಥಿತಿಯಲ್ಲಿ ಉಳಿದಿಲ್ಲ. ನಮ್ಮ ಸೇನೆ ಅಲ್ಲಿಯೇ ಉಳಿದರೆ ವ್ಯಾಪಕ ಸಾವು-ನೋವಿನ ಅಪಾಯವಿದೆ ಎಂದು ಉಕ್ರೇನ್ ಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News