ವಾಷಿಂಗ್ಟನ್ ವಿವಿಯಲ್ಲಿ 30 ಪ್ರತಿಭಟನಾಕಾರರ ಬಂಧನ
ವಾಷಿಂಗ್ಟನ್: ಅಮೆರಿಕದ ಜಾರ್ಜ್ ವಾಷಿಂಗ್ಟನ್ ವಿವಿಯ ಕ್ಯಾಂಪಸ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಫೆಲೆಸ್ತೀನ್ ಪರ ಪ್ರತಿಭಟನಾಕಾರರು ವಿವಿ ಆಡಳಿತ ಮಂಡಳಿಯ ಅಧ್ಯಕ್ಷ ಎಲನ್ ಗ್ರಾಂಬರ್ಗ್ ಅವರ ನಿವಾಸದತ್ತ ಜಾಥಾ ಹೊರಟಿದ್ದ ಸುಮಾರು 30ಕ್ಕೂ ಅಧಿಕ ಜನರನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ವಿವಿಯ ಕ್ಯಾಂಪಸ್‍ನಲ್ಲಿ ಹಾಕಿದ್ದ ಟೆಂಟ್ ಅನ್ನು ತೆರವುಗೊಳಿಸಿದ ಪೊಲೀಸರನ್ನು ಪ್ರತಿಭಟನಾಕಾರರು ಥಳಿಸಿದ್ದಾರೆ ಎಂದು ವರದಿಯಾಗಿದೆ. ವಿವಿ ಕ್ಯಾಂಪಸ್‍ನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವುದಾಗಿ ಆಡಳಿತ ಮಂಡಳಿ ಎಚ್ಚರಿಸಿದೆ. `ಶಾಂತ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಆದರೆ ಪ್ರತಿಭಟನಾ ನಿರತರು ವಿವಿಯ ನೀತಿ, ನಿಯಮಗಳನ್ನು ಉಲ್ಲಂಘಿಸಿದ್ದಾರೆ' ಎಂದು ಆಡಳಿತ ಮಂಡಳಿ ಎಚ್ಚರಿಸಿದೆ. ನ್ಯೂಯಾರ್ಕ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ಚಿಕಾಗೋ ವಿವಿಗಳಲ್ಲೂ ಪ್ರತಿಭಟನಾ ನಿರತರನ್ನು ಬಂಧಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಎಪ್ರಿಲ್ 18ರಂದು ಕೊಲಂಬಿಯಾ ವಿವಿಯಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆ ಆರಂಭಗೊಂಡಂದಿನಿಂದ 2,600ಕ್ಕೂ ಅಧಿಕ ಜನರನ್ನು ಬಂಧಿಸಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.