ಸ್ಥಂಭನಗೊಳಿಸಿದ ರಶ್ಯದ ಆಸ್ತಿಗಳನ್ನು ಬಳಸಿ ಉಕ್ರೇನ್‍ಗೆ ನೆರವು : ಜಿ7 ದೇಶಗಳ ನಿರ್ಧಾರ

Update: 2024-06-13 17:05 GMT

PC : PTI

ರೋಮ್ : ಸ್ಥಂಭನಗೊಳಿಸಿರುವ ರಶ್ಯದ ಆಸ್ತಿಗಳನ್ನು ಬಳಸಿಕೊಂಡು ಈ ವರ್ಷಾಂತ್ಯದೊಳಗೆ ಉಕ್ರೇನ್‍ಗೆ 50 ಶತಕೋಟಿ ಡಾಲರ್ ಮೊತ್ತವನ್ನು ಒದಗಿಸಲು ಜಿ7 ದೇಶಗಳು ಸಮ್ಮತಿಸಿವೆ ಎಂದು ಫ್ರಾನ್ಸ್ ಅಧ್ಯಕ್ಷರ ಹೇಳಿಕೆ ತಿಳಿಸಿದೆ.

ಜಿ7 ದೇಶಗಳ ಶೃಂಗಸಭೆ ಗುರುವಾರ ಇಟಲಿಯ ಪುಗಿಲಾದಲ್ಲಿ ಆರಂಭಗೊಂಡಿದೆ. `ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ನಾವೊಂದು ಒಪ್ಪಂದಕ್ಕೆ ತಲುಪಿದ್ದೇವೆ. ರಶ್ಯದ ಸೆಂಟ್ರಲ್ ಬ್ಯಾಂಕ್‍ನ ಸ್ಥಂಭನಗೊಳಿಸಿದ 325 ಶತಕೋಟಿ ಡಾಲರ್ ಮೌಲ್ಯದ ಆಸ್ತಿಗಳ ಲಾಭಾಂಶವನ್ನು ಉಕ್ರೇನ್‍ಗೆ ನೀಡುವ ಸುಮಾರು 50 ಶತಕೋಟಿ ಡಾಲರ್ ಮೊತ್ತದ ಸಾಲಕ್ಕೆ ಆಧಾರವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ' ಎಂದು ಫ್ರಾನ್ಸ್ ಅಧ್ಯಕ್ಷರ ಕಚೇರಿ ಸಿಬಂದಿ ಹೇಳಿದ್ದಾರೆ.

ಮೂಲತಃ ಇದು ಅಮೆರಿಕದ ಉಪಕ್ರಮವಾಗಿದೆ. ಸೈದ್ಧಾಂತಿಕವಾಗಿ ನೋಡುವುದಾದರೆ, ಸ್ಥಂಭನಗೊಳಿಸಿರುವ ರಶ್ಯದ ಆಸ್ತಿಗಳ ವರಮಾನದಿಂದ ಉಕ್ರೇನ್ ಸಾಲವನ್ನು ಮರುಪಾವತಿಸುತ್ತದೆ. ಆದರೆ ಒಂದು ವೇಳೆ, ರಶ್ಯದ ಆಸ್ತಿಗಳನ್ನು ಸಕ್ರಿಯಗೊಳಿಸಿದರೆ ಅಥವಾ ಆಸ್ತಿಗಳ ವರಮಾನ ಸಾಲ ಮರುಪಾವತಿಗೆ ಸಾಕಾಗದಿದ್ದರೆ ಆಗ ಈ ಹೊರೆಯನ್ನು ಹಂಚಿಕೊಳ್ಳುವ ಬಗ್ಗೆ ಪರಿಗಣಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.

ಇಟಲಿಯಲ್ಲಿ ಗುರುವಾರ ಜಿ7 ಮುಖಂಡರ ಶೃಂಗಸಭೆಯಲ್ಲಿ (ಎಡದಿಂದ) ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾಲ್ರ್ಸ್ ಮಿಚೆಲ್, ಜರ್ಮನ್ ಛಾನ್ಸಲರ್ ಒಲಾಫ್ ಶ್ಹಾಲ್ಝ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಜಪಾನ್ ಪ್ರಧಾನಿ ಫುಮಿಯೊ ಕಿಷಿಡಾ, ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್‍ಡರ್ ಲಿಯೆನ್ ಪಾಲ್ಗೊಂಡರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News