ಗಾಝಾಕ್ಕೆ ಇಸ್ರೇಲ್ ನಿರ್ಬಂಧದ ಬಳಿಕ 1,750 ಮಕ್ಕಳು ಮೃತ್ಯು: ವಿಶ್ವಸಂಸ್ಥೆ
ಗಾಝಾ ಸಿಟಿ: ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಿರ್ಬಂಧ ಹೇರಿದಂದಿನಿಂದ ಯುದ್ಧದಿಂದ ಜರ್ಝರಿತಗೊಂಡಿರುವ ಗಾಝಾದ ಆಸ್ಪತ್ರೆಗಳಲ್ಲಿ ಇಂಧನ ಖಾಲಿಯಾಗಿದ್ದು ಇನ್ಕ್ಯುಬೇಟರ್(ಅಕಾಲಿಕವಾಗಿ ಜನಿಸಿದ ಶಿಶುಗಳನ್ನು ಬೆಚ್ಚಗಿನ ಸ್ಥಳದಲ್ಲಿ ಇರಿಸಲು ಬಳಸುವ ಯಂತ್ರ)ಗಳಲ್ಲಿ ಇರುವ ಕನಿಷ್ಟ 120 ನವಜಾತ ಶಿಶುಗಳು ಅಪಾಯದಲ್ಲಿವೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ರವಿವಾರ ಎಚ್ಚರಿಕೆ ನೀಡಿದೆ.
ಅಕ್ಟೋಬರ್ 7ರ ಹಮಾಸ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಗಾಝಾ ಪಟ್ಟಿಯ ಮೇಲೆ ಆರಂಭಿಸಿದ ಪ್ರತಿದಾಳಿಯಲ್ಲಿ ಇದುವರೆಗೆ 1,750ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.
ಎರಡು ವಾರಗಳಿಗೂ ಅಧಿಕ ಸಮಯದಿಂದ ನಡೆಯುತ್ತಿರುವ ಯುದ್ಧದಲ್ಲಿ ಗಾಯಗೊಂಡಿರುವ ಸಾವಿರಾರು ಮಂದಿಗಷ್ಟೇ ಅಲ್ಲ, ಆಸ್ಪತ್ರೆಯಲ್ಲಿರುವ ಸಾಮಾನ್ಯ ರೋಗಿಗಳಿಗೂ ಔಷಧ, ಇಂಧನ, ವಿದ್ಯುತ್ ಮತ್ತು ನೀರಿನ ತೀವ್ರ ಕೊರತೆ ಎದುರಾಗಿದೆ. ಇಲ್ಲಿನ ಆಸ್ಪತ್ರೆಯಲ್ಲಿ 120 ನವಜಾತ ಶಿಶುಗಳನ್ನು ಇನ್ಕ್ಯುಬೇಟರ್ನಲ್ಲಿ ಇರಿಸಲಾಗಿದ್ದು ಇದರಲ್ಲಿ 70 ಶಿಶುಗಳು ಯಾಂತ್ರಿಕ ವಾತಾಯನ ವ್ಯವಸ್ಥೆಯಲ್ಲಿವೆ. ಇದು ಅತ್ಯಂತ ಕಳವಳದ ವಿಷಯವಾಗಿದೆ ಎಂದು ಯುನಿಸೆಫ್ ವಕ್ತಾರ ಜೊನಾಥನ್ ಕ್ರಿಕ್ಸ್ ಹೇಳಿದ್ದಾರೆ.
ಗಾಝಾ ಪಟ್ಟಿಯಲ್ಲಿರುವ 7 ವಿಶೇಷ ವಾರ್ಡ್ಗಳಲ್ಲಿ ಅಕಾಲಿಕ ಜನಿಸಿದ ಶಿಶುಗಳನ್ನು ಆರೈಕೆ ಮಾಡಲು, ಕೃತಕ ಉಸಿರಾಟದ ವ್ಯವಸ್ಥೆಗೆ ವಿದ್ಯುತ್ ಕೊರತೆ ಎದುರಾಗಿದೆ. ಇಂಧನ ಪೂರೈಕೆ ಮೊಟಕುಗೊಂಡಿರುವುದರಿಂದ ಆಸ್ಪತ್ರೆಗಳಲ್ಲಿ ಜನರೇಟರ್ಗಳೂ ಕಾರ್ಯ ಸ್ಥಗಿತಗೊಳಿಸುವ ಪರಿಸ್ಥಿತಿಯಿದೆ. ಒಂದು ವೇಳೆ ಜನರೇಟರ್ಗಳೂ ಸ್ಥಗಿತಗೊಂಡರೆ ಡಯಾಲಿಸಿಸ್ ಅಗತ್ಯವಿರುವ ಸುಮಾರು 1000 ಜನರಿಗೂ ಅಪಾಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ತುರ್ತು ನೆರವನ್ನು ಹೊತ್ತುತಂದ 20 ಟ್ರಕ್ಗಳು ಶನಿವಾರ ಈಜಿಪ್ಟ್ ಮೂಲಕ ಗಾಝಾ ಪ್ರವೇಶಿಸಿವೆ, ಆದರೆ ಈ ಸರಕುಗಳಲ್ಲಿ ಇಂಧನ ಇರಲಿಲ್ಲ. ಗಾಝಾಕ್ಕೆ ಇಂಧನಗಳನ್ನು ಒದಗಿಸಿದರೆ ಅದನ್ನು ಹಮಾಸ್ ಬಳಸಬಹುದು ಎಂದು ಇಸ್ರೇಲ್ ಹೇಳುತ್ತಿದೆ.
ಇಂಧನದ ಕೊರತೆಯಿಂದ ಇನ್ಕ್ಯುಬೇಟರ್ ಸ್ಥಗಿತಗೊಳ್ಳುವ ಹಂತದಲ್ಲಿದ್ದು ಅಕಾಲಿಕ ಜನಿಸಿದ 130 ಶಿಶುಗಳು ಮರಣ ಹೊಂದುವ ಅಪಾಯವಿದೆ ಎಂದು ಯುನಿಸೆಫ್ ವಕ್ತಾರರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಪ್ರತೀ ದಿನ 160 ಮಕ್ಕಳ ಜನನ:
ಗಾಝಾದಲ್ಲಿ ಪ್ರತೀ ದಿನ ಸುಮಾರು 160 ಮಹಿಳೆಯರು ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಈ ಪ್ರದೇಶದ ಸುಮಾರು 2.4 ದಶಲಕ್ಷ ಜನರಲ್ಲಿ ಗರ್ಭಿಣಿ ಮಹಿಳೆಯರ ಪ್ರಮಾಣ ಸುಮಾರು 50,000 ಎಂದು ವಿಶ್ವಸಂಸ್ಥೆ ಜನಸಂಖ್ಯಾ ನಿಧಿ(ಯುಎನ್ಪಿಎಫ್) ವರದಿ ಮಾಡಿದೆ.
ಗಾಝಾದಲ್ಲಿ ಹಮಾಸ್ ಗುರಿಯಾಗಿಸಿ ತಾನು ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಪ್ರತಿಪಾದಿಸುತ್ತಿದೆ. ಆದರೆ ಕಳೆದ 15 ದಿನಗಳ ಇಸ್ರೇಲ್ ಆಕ್ರಮಣದಲ್ಲಿ ಮೃತಪಟ್ಟ 4,385 ಜನರಲ್ಲಿ ಮಕ್ಕಳ ಸಂಖ್ಯೆ ಸುಮಾರು 2 ಸಾವಿರದಷ್ಟು ಎಂದು ಹಮಾಸ್ ಹೇಳಿದೆ.