ನೈಜೀರಿಯಾದಲ್ಲಿ ಆತ್ಮಾಹುತಿ ದಾಳಿ | 18 ಮಂದಿ ಮೃತ್ಯು ; 42 ಮಂದಿಗೆ ಗಾಯ
ಅಬುಜಾ : ಈಶಾನ್ಯ ನೈಜೀರಿಯಾದಲ್ಲಿ ಶನಿವಾರ ನಡೆದ ಸರಣಿ ಆತ್ಮಹತ್ಯಾ ದಾಳಿಗಳಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದು 42 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ತುರ್ತು ಸೇವಾ ಪ್ರಾಧಿಕಾರವನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಮೊದಲ ಘಟನೆಯಲ್ಲಿ ಮಹಿಳೆಯೊಬ್ಬಳು ತನ್ನ ಬೆನ್ನಿಗೆ ಮಗುವನ್ನು ಕಟ್ಟಿಕೊಂಡು ಗ್ವೋಝ ನಗರದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಆಗಮಿಸಿ ಬಾಂಬ್ ಸ್ಫೋಟಿಸಿದ್ದಾಳೆ. ಕ್ಯಾಮೆರೂನ್ ಗಡಿಯ ಸಮೀಪದಲ್ಲಿರುವ ಆಸ್ಪತ್ರೆಯೊಂದರಲ್ಲಿ ಮತ್ತು ಮದುವೆ ಹಾಲ್‍ನಲ್ಲಿ ನಡೆದ ಸ್ಫೋಟದಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದ್ದ ಸ್ಮಶಾನದಲ್ಲಿ ಮತ್ತೆ ಎರಡು ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ವಕ್ತಾರರು ಮಾಹಿತಿ ನೀಡಿದ್ದಾರೆ. ಮಕ್ಕಳು, ಮಹಿಳೆಯರ ಸಹಿತ ಇದುವರೆಗೆ ಕನಿಷ್ಠ 18 ಮಂದಿ ಮೃತಪಟ್ಟಿದ್ದು ಇತರ 42 ಮಂದಿ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡಿರುವ 19 ಮಂದಿಯನ್ನು ಪ್ರಾದೇಶಿಕ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ಬೋರ್ನೊ ರಾಜ್ಯದ ತುರ್ತುಕಾರ್ಯ ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಬರ್ಕಿಂದೊ ಸೈದುರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ, ಗ್ವೋಝಾದಲ್ಲಿ ಭದ್ರತಾ ಠಾಣೆಯ ಮೇಲೆ ನಡೆದ ದಾಳಿಯಲ್ಲಿ ತನ್ನ ಇಬ್ಬರು ಸದಸ್ಯರು ಮತ್ತು ಓರ್ವ ಭದ್ರತಾ ಸಿಬಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಸಶಸ್ತ್ರ ಹೋರಾಟಗಾರರ ತಂಡವೊಂದು ಹೇಳಿಕೆ ನೀಡಿದ್ದು ಇದನ್ನು ಅಧಿಕಾರಿಗಳು ದೃಢಪಡಿಸಿಲ್ಲ.