ಗಾಝಾಕ್ಕೆ 27 ಟನ್ ಆಹಾರ ಧಾನ್ಯ ಪೂರೈಕೆ: ರಶ್ಯ
Update: 2023-10-19 17:27 GMT
ಮಾಸ್ಕೋ: ರಶ್ಯವು ಗುರುವಾರ ಗಾಝಾ ಪಟ್ಟಿಯ ನಿವಾಸಿಗಳಿಗೆ 27 ಟನ್‍ಗಳ ಮಾನವೀಯ ನೆರವನ್ನು ಒದಗಿಸಿದ್ದು ಇದು ಈಜಿಪ್ಟ್ ಮೂಲಕ ರವಾನೆಯಾಗಲಿದೆ ಎಂದು ರಶ್ಯದ ತುರ್ತು ಸೇವಾ ಇಲಾಖೆ ಹೇಳಿದೆ.
ಗೋಧಿ, ಸಕ್ಕರೆ, ಅಕ್ಕಿ ಮತ್ತು ಗೋಧಿಹಿಟ್ಟು ಸಹಿತ 27 ಟನ್‍ಗಳಷ್ಟು ತುರ್ತು ಅಗತ್ಯದ ವಸ್ತುಗಳನ್ನು ಹೊತ್ತ ವಿಶೇಷ ವಿಮಾನವು ಮಾಸ್ಕೋ ಬಳಿಯ ರಮೆನ್‍ಸ್ಕೋಯೆ ವಿಮಾನನಿಲ್ದಾಣದಿಂದ ಈಜಿಪ್ಟ್ ನ ಅಲ್-ಅರಿಷ್ ವಿಮಾನ ನಿಲ್ದಾಣದತ್ತ ಹಾರಿದೆ. ಈ ಸರಕನ್ನು ಗಾಝಾ ಪಟ್ಟಿಗೆ ಕಳುಹಿಸಲು ಈಜಿಪ್ಟಿಯನ್ ರೆಡ್‍ಕ್ರಾಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಇಲಾಖೆಯ ಸಹಾಯಕ ಸಚಿವೆ ಇಲ್ಯಾ ಡೆನಿಸೋವ್ ಹೇಳಿದ್ದಾರೆ.
ಗಾಝಾ ಸಂಘರ್ಷದ ಬಳಿಕ ವಲಸಿಗರ ಪ್ರವಾಹವನ್ನು ತಡೆಯಲು ರಫಾ ಗಡಿದಾಟನ್ನು ಈಜಿಪ್ಟ್ ಮುಚ್ಚಿತ್ತು. ರಫಾ ಗಡಿದಾಟುವಿನ ಮೂಲಕ ಗಾಝಾಕ್ಕೆ ಮನವೀಯ ನೆರವಿನ ಪೂರೈಕೆಗೆ ಅವಕಾಶ ಮಾಡಿಕೊಡುವ ಒಪ್ಪಂದ ಅಮೆರಿಕ ಅಧ್ಯಕ್ಷ ಬೈಡನ್ ಮಧ್ಯಸ್ಥಿಕೆಯಲ್ಲಿ ಬುಧವಾರ ಅಂತಿಮಗೊಂಡಿದೆ.