ಪಾಕಿಸ್ತಾನಕ್ಕೆ 700 ದಶಲಕ್ಷ ಡಾಲರ್ ನೆರವು: ಐಎಂಎಫ್ ಅನುಮೋದನೆ

Update: 2024-01-12 16:53 GMT

Photo: NDTV 

ವಾಷಿಂಗ್ಟನ್: ವಿದೇಶಿ ಸಾಲದ ಮರುಪಾವತಿಯ ಒತ್ತಡ ಮತ್ತು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಸುಮಾರು 700 ದಶಲಕ್ಷ ಡಾಲರ್ ಹಣಕಾಸು ನೆರವನ್ನು ತಕ್ಷಣ ಒದಗಿಸುವ ಪ್ರಸ್ತಾವನೆಯನ್ನು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಅನುಮೋದಿಸಿದೆ.

ಇದರೊಂದಿಗೆ ಐಎಂಎಫ್ ಪಾಕಿಸ್ತಾನಕ್ಕೆ ನೀಡುವ ಸಾಲದ ಮೊತ್ತ ಸುಮಾರು 1.9 ಶತಕೋಟಿ ಡಾಲರ್ ಗೆ ತಲುಪಲಿದೆ. ಗಮನಾರ್ಹ ಆಘಾತಗಳ ಬಳಿಕ ಪಾಕಿಸ್ತಾನದ ಆರ್ಥಿಕ ಬೆಳವಣಿಗೆಯು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಬಾಹ್ಯ ಒತ್ತಡಗಳು ಸರಾಗವಾಗುವ ಮತ್ತು ಆರ್ಥಿಕ ಚಟುವಟಿಕೆ ವೇಗ ಪಡೆದುಕೊಳ್ಳುವ ಸೂಚನೆ ಕಾಣುತ್ತಿದೆ. ಪ್ರಸ್ತುತ ಆವೇಗವು ಮುಂದುವರಿಯಲು ಸ್ಥಿರ ಮತ್ತು ಸದೃಢ ಆಡಳಿತದ ಅಗತ್ಯವಿದೆ ಎಂದು ಐಎಂಎಫ್ ಸಹಾಯಕ ಆಡಳಿತ ನಿರ್ದೇಶಕಿ ಅಂಟೋನಿಯೆಟ್ ಸಯೆಹ್ ಹೇಳಿದ್ದಾರೆ.

ಐಎಂಎಫ್ನ ಕಾರ್ಯಕ್ರಮವನ್ನು ಜಾರಿಗೊಳಿಸಿದಂದಿನಿಂದ ಪಾಕಿಸ್ತಾನದಲ್ಲಿ ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಸಾಮಾನ್ಯವಾಗಿ ಸುಧಾರಿಸಿವೆ ಮತ್ತು ಈ ವರ್ಷ 2% ಆರ್ಥಿಕ ಬೆಳವಣಿಗೆಯನ್ನು ಊಹಿಸಲಾಗಿದೆ. ವಿದೇಶಿ ಮೀಸಲು ನಿಧಿ ಹೆಚ್ಚಳ ಮತ್ತು ಸ್ಥಿರ ವಿನಿಮಯ ದರದೊಂದಿಗೆ ಹಣಕಾಸಿನ ಸ್ಥಿತಿ ಬಲಗೊಂಡಿದೆ ಎಂದು ಐಎಂಎಫ್ ಹೇಳಿದೆ. ಐಎಂಎಫ್ ಉಲ್ಲೇಖಿಸಿದ ಪ್ರಗತಿಯ ಹೊರತಾಗಿಯೂ ದೇಶದ ಅಂಕಿಅಂಶಗಳ ಇಲಾಖೆ ಪ್ರಕಾರ, ಪಾಕಿಸ್ತಾನದಲ್ಲಿ ಗ್ರಾಹಕ ಹಣದುಬ್ಬರವು ಡಿಸೆಂಬರ್ ಗೆ ಅಂತ್ಯಗೊಂಡ ವರ್ಷದಲ್ಲಿ 29.7% ಏರಿಕೆಯಾಗಿದೆ. ಬಿಗಿಯಾದ ಆರ್ಥಿಕ ನೀತಿ ಜಾರಿಯಲ್ಲಿದ್ದರೆ ಈ ವರ್ಷದ ಮಧ್ಯಭಾಗದ ವೇಳೆಗೆ ಪಾಕಿಸ್ತಾನದ ಹಣದುಬ್ಬರ 18.5%ಕ್ಕೆ ಇಳಿಕೆಯಾಗಬಹುದು ಎಂದು ಐಎಂಎಫ್ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News