ಬಾಂಗ್ಲಾದೇಶ | ಮಳೆ, ಪ್ರವಾಹದಿಂದ ಕನಿಷ್ಠ 8 ಮಂದಿ ಮೃತ್ಯು

Update: 2024-07-07 16:11 GMT

Photo : x/UNICEF South Asia

ಢಾಕಾ : ಬಾಂಗ್ಲಾದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 8ಕ್ಕೇರಿದ್ದು ಪ್ರಮುಖ ನದಿಗಳ ದಂಡೆ ಒಡೆದು ತಗ್ಗು ಪ್ರದೇಶಗಳು ಜಲಾವೃತಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

20 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ. ಶಹಜಾದ್ಪುರದಲ್ಲಿ ನದಿಯಲ್ಲಿ ದೋಣಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಸಣ್ಣ ದೋಣಿಯಲ್ಲಿ 9 ಮಂದಿ ಪ್ರಯಾಣಿಸುತ್ತಿದ್ದರು. ದೋಣಿ ಮುಳುಗಿದಾಗ 7 ಮಂದಿ ಈಜಿ ದಡಸೇರಿದ್ದು ಈಜು ಬಾರದ ಬಾಲಕರು ಮೃತಪಟ್ಟಿದ್ದಾರೆ.

ಎರಡು ಪ್ರತ್ಯೇಕ ಘಟನೆಗಳಲ್ಲಿ ನೆರೆ ನೀರಿಗೆ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿದ್ದು ನೀರಿನ ಸಂಪರ್ಕಕ್ಕೆ ಬಂದ ಮೂವರು ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾರೆ ಎಂದು ಕುರಿಗ್ರಾಮ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ಬಿಷ್ವದೇಬ್ ರಾಯ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಪ್ರವಾಹದಿಂದಾಗಿ ತಗ್ಗು ಪ್ರದೇಶದ ಹಲವರನ್ನು ಸ್ಥಳಾಂತರಿಸಲಾಗಿದ್ದು ಇವರನ್ನು ತಾತ್ಕಾಲಿಕ ಶಿಬಿರದಲ್ಲಿ ನೆಲೆಗೊಳಿಸಲಾಗಿದೆ. ಉತ್ತರ ಭಾಗದಲ್ಲಿ ನೆರೆಬಾಧಿತ ಜಿಲ್ಲೆಗಳಿಗೆ ಶುದ್ಧ ನೀರು ಮತ್ತು ಆಹಾರವನ್ನು ಪೂರೈಸಲಾಗಿದೆ. ದೇಶದ 64 ಜಿಲ್ಲೆಗಳಲ್ಲಿ 17 ತೀವ್ರ ತೊಂದರೆಗೊಳಗಾಗಿದೆ. ಬ್ರಹ್ಮಪುತ್ರಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ ಉತ್ತರದ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಪ್ರವಾಹದ ಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು ಎಂದು ವಿಪತ್ತು ನಿರ್ವಹಣಾ ಸಚಿವಾಲಯದ ಕಾರ್ಯದರ್ಶಿ ಕಮ್ರಲ್ ಹಸನ್ ಹೇಳಿದ್ದಾರೆ. ಕುರಿಗ್ರಾಮ್ ಜಿಲ್ಲೆಯ 9 ಗ್ರಾಮೀಣ ನಗರಗಳಲ್ಲಿ ಎಂಟು ನೆರೆನೀರಲ್ಲಿ ಮುಳುಗಿದೆ. ಈ ನಗರಗಳಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News