ಬ್ರಿಟನ್ ಸಂಸತ್ ಗೆ ದಾಖಲೆಯ ಪ್ರಮಾಣದಲ್ಲಿ ಭಾರತ ಮೂಲದ ಸಂಸದರ ಆಯ್ಕೆ

Update: 2024-07-05 13:06 GMT

PC : indianexpress.com

ಲಂಡನ್‌: ಬ್ರಿಟನ್ ಸಂಸತ್ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಸಂಸತ್ ಗೆ ದಾಖಲೆಯ ಪ್ರಮಾಣದಲ್ಲಿ ಭಾರತ ಮೂಲದ ಸಂಸದರು ಆಯ್ಕೆಯಾಗಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಬಾರಿಯ ಚುನಾವಣೆಯಲ್ಲಿ ಆಯ್ಕೆಯಾದವರಲ್ಲಿ 26 ಮಂದಿ ಭಾರತ ಮೂಲದವರು. 2019ರಲ್ಲಿ ಭಾರತ ಮೂಲದ 15 ಸಂಸದರು ಆಯ್ಕೆಯಾಗಿದ್ದರು.

ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಅವರು ಯಾಕ್‌ಶೈರ್ನ ರಿಚ್‌ಮಂಡ್‌ ಹಾಗೂ ನಾರ್ತಲೆಟ್ರೊನ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿಗಳಾದ ಸುಯೆಲ್ಲಾ ಬ್ರೇವ್‌ಮೆನ್ ಹಾಗೂ ಪ್ರೀತಿ ಪಟೇಲ್, ಸುನಕ್ ಸಂಪುಟದದಲ್ಲಿ ಸಚಿವೆಯಾಗಿದ್ದ ಗೋವಾ ಮೂಲದ ಕ್ಲಾರಿ ಕುಟಿನ್ಹೊ, ಗಗನ್ ಮಹೀಂದ್ರಾ, ಶಿವಾನಿರಾಜ ಅವರು ಗೆದ್ದವರಲ್ಲಿ ಪ್ರಮುಖರು.

ಲೇಬರ್ ಪಕ್ಷದಿಂದ ಹೆಚ್ಚಿನ ಭಾರತ ಮೂಲದ ಸಂಸದರು ಆಯ್ಕೆಯಾಗಿದ್ದಾರೆ. ಫೆಲ್ತಮ್ ಹಾಗೂ ಹೆಸ್ಟನ್‌ ಕ್ಷೇತ್ರದಿಂದ ಸೀಮಾ ಮಲ್ಹೋತ್ರಾ ಸುಲಭ ಗೆಲುವು ದಾಖಲಿಸಿದ್ದಾರೆ. ವಲ್‌ಸಲ್‌ ಹಾಗೂ ಬ್ಲಾಕ್ಸ್‌ವಿಚ್‌ನಿಂದ ವಲೇರಿ ವಾಜ್‌, ವಿಗನ್‌ನಲ್ಲಿ ಲಿಸಾ ನ್ಯಾಂಡಿಯವರು ಗೆದ್ದಿದ್ದಾರೆ.

ಬ್ರಿಟಿಷ್ ಸಿಖ್‌ ಸಂಸದರಾದ ಪ್ರೀತ್ ಕೌರ್‌ ಗಿಲ್‌, ತನ್‌ಮನ್‌ಜೀತ್‌ ಸಿಂಗ್ ದೇಶಿ ಅವರು ಬರ್ಮಿಂಗ್‌ಹ್ಯಾಮ್ ಎಜ್‌ಬಾಸ್ಟನ್‌ ಹಾಗೂ ಸ್ಲೋ ಕ್ಷೇತ್ರದಿಂದ ಜಯಗಳಿಸಿದ್ದಾರೆ.

ಹರ್‌ಪ್ರೀತ್ ಉಪ್ಪಲ್, ಸೋಜನ್ ಜೋಸೆಫ್‌, ಜೀವನ್ ಸಂದೆರ್‌, ಬಗ್ಗಿ ಶಂಕರ್‌, ಸತ್ವೀರ್ ಕೌರ್‌, ಕನಿಷ್ಕ ನಾರಾಯಣ್‌ , ವರಿಂದರ್‌ ಜಸ್‌, ಗುರಿಂದರ್ ಜೋಸನ್, ಸುರೀನಾ ಬ್ರಕೆನ್‌ಬಿಜ್‌, ಸೋನಿಯಾ ಕುಮಾರ್‌, ಕೀರ್ತಿ ಎಂಟ್ವಿಸಲ್‌, ಜಸ್‌ ಅತ್ವಾಲ್ ಮುಂತಾದವರು ಲೇಬರ್ ಪಕ್ಷದಿಂದ ಮೊದಲ ಬಾರಿಗೆ ಗೆಲುವು ಸಾಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News